ADVERTISEMENT

ಬಾರದ ಮಳೆ: ಒಣಗಿದ ಕೆರೆಗಿಳಿದ ರೈತರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 5:25 IST
Last Updated 3 ಜನವರಿ 2012, 5:25 IST

ಕೂಡ್ಲಿಗಿ: ತಾಲ್ಲೂಕಿನಾದ್ಯಂತ ಕಳೆದ 3-4 ತಿಂಗಳಿನಿಂದ ಮಳೆ ಬಾರದೆ ರೈತರು ಕಂಗಾಲಾಗಿದ್ದು, ಬಹುತೇಕ ರೈತರು ಕಾಫಿ  ತೋಟಗಳ ಕಡೆ ಗುಳೆ ಹೋಗಿದ್ದಾರೆ. ಇನ್ನುಳಿದ ರೈತರು ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲೇ ಕೆಲವರು ಒಣಗಿದ ಕೆರೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ.

ಕೂಡ್ಲಿಗಿ ಹೊರಭಾಗದಲ್ಲಿರುವ ದೊಡ್ಡಕೆರೆ ಒಟ್ಟು 92.56 ಹೆಕ್ಟೇರ್‌ನಷ್ಟು ವಿಸ್ತೀರ್ಣವನ್ನು ಹೊಂದಿದ್ದು, ಮಳೆ ಇಲ್ಲದೆ ಈ ಕೆರೆ ಕಳೆದ 3 ತಿಂಗಳಿನಿಂದ ಒಣಗಿ ಬಾಯಿ ಬಿಡುತ್ತಿದೆ. ಇದರಲ್ಲಿಯೇ ಕೆಲ ರೈತರು ತಮ್ಮ ಬದುಕಿಗಾಗಿ ಕರಬೂಜ, ಸೌತೆಕಾಯಿ, ಹೀರೆಕಾಯಿಗಳನ್ನು ಬೆಳೆಯುತ್ತಿದ್ದಾರೆ. ಇರುವ ಅಲ್ಪಸ್ವಲ್ಪ ತೇವಾಂಶದಲ್ಲಿಯೇ ಇವುಗಳನ್ನು ಬೆಳೆಯಲು ರೈತರು ಹರಸಾಹಸ ಮಾಡುತ್ತಿದ್ದಾರೆ.

ಕೆರೆಯ ಪಕ್ಕದಲ್ಲಿರುವ ಕೆರೆಕಾವಲರ ಹಟ್ಟಿ ಹಾಗೂ ಇತರ ಗ್ರಾಮಗಳ ರೈತರು ಇಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ. ಇಡೀ ಕೆರೆಯಲ್ಲಿ ಸುಮಾರು 60 ರೈತರು ಕಾಯಿಗಳನ್ನು ಬೆಳೆಯುತ್ತಿದ್ದಾರೆ. ಕರಬೂಜ, ಸೌತೆ, ಹೀರೇಕಾಯಿಗಳ ಬೀಜ ತಂದು ತಮಗೆ ತಿಳಿದಷ್ಟು ಜಾಗದಲ್ಲಿ ಬಿತ್ತಿ ಬೆಳೆಯಲು ಪ್ರಯತ್ನಿಸು ತ್ತಿದ್ದಾರೆ. ಕೆರೆಯಲ್ಲಿಯೇ ಪುಟ್ಟ ಗುಡಿಸಲು ರೀತಿಯಲ್ಲಿ ಮರೆಗಳನ್ನು ಮಾಡಿಕೊಂಡು ಬಳ್ಳಿಗಳನ್ನು ಕಾಯುತ್ತಿದ್ದಾರೆ.

`ಕಳೆದ 3-4 ವರ್ಷಗಳವರೆಗೆ ಉತ್ತಮ ಮಳೆಯಾಗಿದ್ದು, ಕೆರೆಯಲ್ಲಿ ನೀರಿರುತ್ತಿತ್ತು. ಆದರೆ ಇದೇ ಬಾರಿ ಕೆರೆ ಒಣಗಿ ಜಾನುವಾರುಗಳು, ಜನರಿಗೆ ಕುಡಿಯುವ ನೀರಿನ ತೊಂದರೆಯಾಗಿದೆ~ ಎಂದು ಕೆ.ಕೆ.ಹಟ್ಟಿಯ ರೈತ ಬಸವರಾಜ ಹೇಳುತ್ತಾರೆ. ಮಳೆಯಾದರೆ ಬೆಳೆ, ಮಳೆಯೇ ಇಲ್ಲವಾದರೆ ನಾವು ಬದುಕುವುದಾದರೂ ಹೇಗೆ? ಎಂದು ಲಕ್ಷ್ಮಣ, ಹನುಮಂತಪ್ಪ ಪ್ರಶ್ನಿಸುತ್ತಾರೆ. ಹೇಗೋ ಬದುಕಲು ಕೆರೆಯಲ್ಲಿ ಬೀಜಗಳನ್ನು ಬಿತ್ತಿ ಕರಬೂಜ, ಸೌತೆ, ಹಿರೇಕಾಯಿಗಳನ್ನು ಬೆಳೆಯುತ್ತಿರು ವುದಾಗಿ ಅವರು ಹೇಳುತ್ತಾರೆ.

`ಕರಬೂಜ ಬೆಳೆಯಲು ಮೂರು ತಿಂಗಳು ಕಾಲಾವಕಾಶ ಬೇಕು. ಮಾರುಕಟ್ಟೆಯಲ್ಲಿ ತಂದಿರುವ ಕರಬೂಜದ ತೀರ ಹಳೆಯ ಬೀಜ ವಾದ್ದರಿಂದ ಮೊಳಕೆಯೊಡೆಯುತ್ತಲೇ ಇಲ್ಲ~ ಎನ್ನುವುದು ಶಿವಣ್ಣ ಅವರ ಗೋಳು. ಕೆಲವರು ಕರಬೂಜ ಬಿತ್ತಿ ಮೊಳಕೆಗಾಗಿ ಕಾಯುತ್ತಿದ್ದರೆ, ಇನ್ನೂ ಕೆಲವರು ಯಶಸ್ವಿಯಾಗಿದ್ದಾರೆ. ಆದರೆ ಈ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದಿರುವುದು ಮಾತ್ರ ಇವರನ್ನು ಕಂಗಾಲಾಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.