ADVERTISEMENT

ಬಾಲ್ಯ ವಿವಾಹ ನಿಲ್ಲಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 7:45 IST
Last Updated 12 ಅಕ್ಟೋಬರ್ 2012, 7:45 IST

ಕೂಡ್ಲಿಗಿ: ವಿವಿಧ ಸಂಘಟನೆಗಳು ಹಾಗೂ ಅಧಿಕಾರಿಗಳ ಮಿಂಚಿನ ದಾಳಿ ನಡೆಸಿ ಪಟ್ಟಣದಲ್ಲಿ ಗುರುವಾರ ನಡೆಯ ಬೇಕಿದ್ದ 2 ಜೋಡಿ ಬಾಲ್ಯ ವಿವಾಹ ಗಳನ್ನು ತಡೆಹಿಡಿದಿದ್ದಾರೆ. 13 ವರ್ಷದ ರೇಣುಕ ಹಾಗೂ 14 ವರ್ಷದ ರಮೇಶ ಮತ್ತು 8 ವರ್ಷದ ಲಕ್ಷ್ಮಿ ಹಾಗೂ 13 ವರ್ಷದ ಮಂಜುನಾಥನೊಂದಿಗೆ ನಡೆಯಬೇಕಾಗಿದ್ದ ವಿವಾಹವನ್ನು ಅಧಿಕಾರಿಗಳು ತಡೆದಿದ್ದಾರೆ.

ಪಟ್ಟಣದ ವಂದೇಮಾತರಂ ಜನ ಜಾಗೃತಿ ವೇದಿಕೆ ಹಾಗೂ ಇತರ ಸಂಘಟನೆಗಳು ಖಚಿತ ಮಾಹಿತಿಯ ಆಧಾರದ ಮೇರೆಗೆ ಬಾಲ್ಯ ವಿವಾಹ ನಡೆಯುತ್ತಿದೆ ಎಂಬುದನ್ನು ತಹ ಸೀಲ್ದಾರ್ ಜವರೇಗೌಡರ ಗಮನಕ್ಕೆ ತಂದರು.

ತಕ್ಷಣ ಜಾಗೃತರಾದ ತಹಸೀಲ್ದಾರ, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಅನ್ನಪೂರ್ಣಮ್ಮ ಹಾಗೂ ವಕೀಲರಾದ ಕೆ.ಎಚ್.ಎಂ.ಶೈಲಜಾ, ವಂದೇ ಮಾತರಂ ಜನಜಾಗೃತಿ ವೇದಿಕೆಯ ಅಧ್ಯಕ್ಷ ವಿ.ಜಿ.ವೃಷಭೇಂದ್ರ ಮತ್ತು ವೆಂಕಟೇಶ, ನಾಗರಿಕ ಹಿತ ರಕ್ಷಣಾ ವೇದಿಕೆಯ ಕಾವಲ್ಲಿ ಶಿವಪ್ಪ ನಾಯಕ ಮತ್ತಿತರರೊಂದಿಗೆ ವಿವಾಹ ನಡೆಯುತ್ತಿರುವ ಸ್ಥಳವಾದ ಪಟ್ಟಣದ ಗುಡೇಕೋಟೆ ರಸ್ತೆಯ ನೀರಿನ ಟ್ಯಾಂಕ್ ಬಳಿ ಕಾರ್ಯಾಚರಣೆ ನಡೆಸಿ ವಿವಾಹ ವನ್ನು ತಡೆಗಟ್ಟಿದರು. ನಂತರ ಬಾಲಕ, ಬಾಲಕಿಯ ಪಾಲಕರು, ಪೋಷಕರಿಗೆ ಬಾಲ್ಯ ವಿವಾಹದ ದುಷ್ಪರಿಣಾಮ ಗಳನ್ನು ತಿಳಿಸಿದರು.

ಅಲ್ಲದೆ ಬಾಲ್ಯ ವಿವಾಹವನ್ನು ಮಾಡುವುದಿಲ್ಲ ಎಂಬ ಮುಚ್ಚಳಿಕೆಯನ್ನು ಪೋಷಕರಿಂದ ಬರೆಸಿಕೊಳ್ಳಲಾಯಿತು. ಕಾನೂನಿನ ಎಚ್ಚರಿಕೆಯನ್ನೂ ತಿಳಿ ಹೇಳಲಾಯಿತು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ರಮೇಶ ನಾಯ್ಕ, ವಂದೇ ಮಾತರಂ ಜನಜಾಗೃತಿ ವೇದಿಕೆಯ ಬಸವರಾಜ, ಡಿ.ಕೊಟ್ರೇಶ್, ಬಿ. ಕೊಟ್ರೇಶ್, ಕೊತ್ಲಪ್ಪ, ಎರಿಸ್ವಾಮಿ, ಲಕ್ಷ್ಮೀದೇವಿ, ಪಾಲಯ್ಯ, ಪೊಲೀಸ್ ಇಲಾಖೆಯ ವಿಶ್ವೇಶ್ವರಯ್ಯ ಮುಂತಾ ದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.