ADVERTISEMENT

ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 22 ಮೇ 2012, 6:10 IST
Last Updated 22 ಮೇ 2012, 6:10 IST
ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಜಾಥಾ
ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಜಾಥಾ   

ಬಳ್ಳಾರಿ: ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘವು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಅಂಗವಾಗಿ ಸೋಮವಾರ ನಗರದಲ್ಲಿ  ಏರ್ಪಡಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಕೈಗಾರಿಕೆ ಮತ್ತು ಡಿಸ್ಟಿಲರಿ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಚಾಲನೆ ನೀಡಿದರು.

14 ವರ್ಷದೊಳಗಿನ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸದೆ, ಆ ಮಕ್ಕಳಿಗೆ ಕಡ್ಡಾಯವಾಗಿ ಶಾಲೆಗೆ ಕಳುಹಿಸಿ, ಅಕ್ಷರಾಭ್ಯಾಸ ಕೊಡಿಸಬೇಕು. ಈ ವಯೋಮಾನದ ಮಕ್ಕಳನ್ನು ದುಡಿಮೆಗೆ ಹಚ್ಚಿಕೊಳ್ಳುವ ಅಂಗಡಿ, ಹೋಟೆಲ್, ಉದ್ದಿಮೆ, ವಾಹನಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬಾಲ ಕಾರ್ಮಿಕ ಪದ್ಧತಿಯನ್ನು ಪೋಷಿಸುವ ಉದ್ಯೋಗದಾತರಿಗೆ ರೂ 20 ಸಾವಿರದವರೆಗೆ ದಂಡವನ್ನೂ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ ಎಂಬ ಸಂದೇಶ ಸಾರುತ್ತ ಸಾಗಿದ  ಮೆರವಣಿಗೆಯು, ನಗರದ ಬ್ರೂಸ್ ಪೇಟೆ, ತೇರು ಬೀದಿ, ಬ್ರಾಹ್ಮಣ ಬೀದಿ ಮತ್ತಿತರ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಸಂಚರಿಸಿತು.

ಮೆರವಣಿಗೆಗೆ ವಿವಿಧ ಕಲಾ ತಂಡಗಳ ಸದಸ್ಯರು, ಬೀದಿ ನಾಟಕ ಕಲಾವಿದರು ಮೆರಗು ನೀಡಿದರು. ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಇದೇ ಮಾದರಿಯ ಜಾಗೃತಿ ಕಾರ್ಯಕ್ರಮಗಳನ್ನು ಮೇ 28ರವರೆಗೆ ಹಮ್ಮಿಕೊಳ್ಳಲು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘವು ನಿರ್ಧರಿಸಿದೆ ಎಂದು ಯೋಜನಾ ನಿರ್ದೇಶಕ ಮೌನೇಶ್ ತಿಳಿಸಿದರು.ಕಾರ್ಮಿಕ ಇಲಾಖೆಯ ಅಧಿಕಾರಿ ವೆಂಕಟಸ್ವಾಮಿ, ಸಂಪನ್ಮೂಲ ವ್ಯಕ್ತಿ ಪೀರ್ ಮಹಮದ್, ಬಾಲಕಾರ್ಮಿಕ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕ ಸಿಬ್ಬಂದಿ  ಉಪಸ್ಥಿತರಿದ್ದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.