ADVERTISEMENT

`ಬಿಜೆಪಿ ಅಧಿಕಾರಾವಧಿಯಲ್ಲಿ ರಾಜ್ಯದ ಘನತೆ ಮಣ್ಣುಪಾಲು'

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:15 IST
Last Updated 6 ಡಿಸೆಂಬರ್ 2012, 6:15 IST

ಹೂವಿನಹಡಗಲಿ : ಬಿಜೆಪಿ ಸರ್ಕಾರ ಅಧಿಕಾರಾವಧಿಯಲ್ಲಿ ಕರ್ನಾಟಕದ ಘನತೆ ಮಣ್ಣು ಪಾಲಾಗಿದೆ ಎಂದು ಮಾಜಿ ಸಚಿವ ಹಾಗೂ ವೀಕ್ಷಕ ಮಲ್ಲಿಕಾರ್ಜುನ ನಾಗಪ್ಪ ಹೇಳಿದರು.ದಿ.ಎಂ.ಪಿ.ಪ್ರಕಾಶ್ ತೋಟದಲ್ಲಿ ಸೋಮವಾರ ಸಂಜೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿ ಅವರು ಮಾತನಾಡಿದರು.

ನಂಬರ್ 1 ಆಗಿದ್ದ ಕರ್ನಾಟಕವನ್ನು ಸೊನ್ನೆಗಿಳಿಸಿದ ಕೀರ್ತಿ ಬಿಜೆಪಿಯವರಿಗೆ ಸಲ್ಲುತ್ತದೆ ನಿಮ್ಮಳಗಿನ ಭಿನ್ನಾಭಿಪ್ರಾಯ ವನ್ನು ಬದಿಗಿಟ್ಟು ಪಕ್ಷದ ಹೈಕಮಾಂಡ್ ಸೂಚಿಸುವ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಸಾಮಾನ್ಯ ಕಾರ್ಯಕರ್ತನಿಗೂ ಕಾಂಗ್ರೆಸ್ ಟಿಕೆಟ್ ಕೇಳುವ ಹಕ್ಕಿದೆ. ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಗೆ ಅಡ್ಡಿಪಡಿಸಬಾರದು ಎಂದರು.

ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ವೀಕ್ಷಕ ಕೆ.ಎನ್.ರಾಜಣ್ಣ ಮಾತನಾಡಿ, ಕಾಂಗ್ರೆಸ್ ಸೋಲಿಸುವ ಶಕ್ತಿ ಸಾಮರ್ಥ್ಯ ಕಾಂಗ್ರೆಸ್ಸಿಗರಿಗಿದೆ ಹೊರತು ವಿರೋಧ ಪಕ್ಷಗಳಿಗಿಲ್ಲ.  ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಕಾಂಗ್ರೆಸ್‌ಗೆ ಗೆಲುವು ತಂದುಕೊಡಿ ಎಂದರು.

`ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆಕೊಡುವ ಏಕೈಕ ಪಕ್ಷವಾಗಿದೆ. ಜನತಾ ಮನೆಯಲ್ಲಿ ವಾಸಿಸುವವನೂ ಕರೋಡ್‌ಪತಿಗಳ ವಿರುದ್ಧ ಸೆಣಸಿ ಗೆಲ್ಲುವ ಸಾಮರ್ಥ್ಯಹೊಂದಿದವರಾಗಿದ್ದಾರೆ ಎಂದರು. ಕಾರ್ಯಕರ್ತರು ಹಾಗೂ ಅಭಿಮಾನಿಗಳು ವ್ಯಕ್ತಪಡಿಸಿದ ಭಾವನೆಗಳಿಗೆ ಬೆಲೆ ಬರುವ ಹಾಗೆ ತಾವು ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸುತ್ತೇವೆ' ಎಂದರು.

ಬರುವ ಚುನಾವಣೆಯಲ್ಲಿ ಹಡಗಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮುತ್ಸದ್ದಿ ರಾಜಕಾರಣಿ ಎಂ.ಪಿ.ಪ್ರಕಾಶ್‌ರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಚ್.ಆಂಜನೇಯ ಮಾತನಾಡಿ, ಆಡಳಿತರೂಢ ಬಿಜೆಪಿ ಮುಖಂಡರು ಆಂತರಿಕ ಕಚ್ಚಾಟದಲ್ಲಿದ್ದಾರೆ, ಭ್ರಷ್ಟಾಚಾರ, ಸ್ವಜನಪಕ್ಷಪಾತದಲ್ಲಿ ಮುಳುಗಿರುವ ಬಿಜೆಪಿ ಮುಖಂಡರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ. ಕೂಡಲೇ ವಿಧಾನಸಭೆ ವಿಸರ್ಜಿಸಿ ಜನಾದೇಶ ಹೋಗುವಂತೆ ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ರವೀಂದ್ರ ಮಾತನಾಡಿ ಹಡಗಲಿ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಹೊರತುಪಡಿಸಿ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಕ್ಷೇತ್ರ ಪ್ರತಿನಿಧಿಸಿದ್ದ ಅಭ್ಯರ್ಥಿ ಪಿ.ಟಿ.ಪರಮೇಶ್ವರನಾಯ್ಕ ಅವರು ಸೋತಾಗಲೂ ಕೂಡ ನಿರಂತರವಾಗಿ ಜನರ ಮಧ್ಯೆ ಇದ್ದು  ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದರು.

ಕಾರ್ಯಕರ್ತರು ಮತ್ತು ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯಗಳಿಗೆ ಮನ್ನಣೆ ನೀಡದೇ ಕೇವಲ ಬೆರಳೆಣಿಕೆಯ ಮುಖಂಡರ ಮಾತುಗಳಿಗೆ ಬೆಲೆ ಕೊಟ್ಟರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

  ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಆಶಾಲತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ ಚಿದಾನಂದ, ಎಂ.ಪರಮೇಶ್ವರಪ್ಪ, ಪುರಸಭೆ ಅಧ್ಯಕ್ಷೆ ಯು.ರೇಣುಕಮ್ಮ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ  ದುರುಗಮ್ಮ, ಎ.ಪಿ.ಎಂ.ಸಿ. ಅಧ್ಯಕ್ಷ ಪಿ.ವಿಜಯಕುಮಾರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ  ಹಬೀದ್‌ಹುಸೇನ್, ತಾಲ್ಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಿ.ಚಾಂದಸಾಹೇಬ್, ಹಬೀಬುಲ್ಲಾ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಲಾಲ್ಯಾನಾಯ್ಕ ಉಪಸ್ಥಿತರಿದ್ದರು.
ಟಿಕೇಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಜಿ.ಪಂ.ಮಾಜಿ ಸದಸ್ಯ ವಿ.ಪಿ. ಪರಮೇಶ್ವರನಾಯ್ಕ, ಕಾಶಿನಾಥ ನಾಯ್ಕ, ರಾಮಾನಾಯ್ಕ ವೀಕ್ಷಕರಿಗೆ ಅರ್ಜಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.