ADVERTISEMENT

ಬಿಜೆಪಿ ಅಭ್ಯರ್ಥಿ ಕೆ.ನೇಮಿರಾಜನಾಯ್ಕ ನಾಮಪತ್ರ

ರಾಜಯೋಗ, ಅಮೃತಘಳಿಗೆ ನಂಬಿಕೆ: ದಿಢೀರ್‌ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 5:24 IST
Last Updated 20 ಏಪ್ರಿಲ್ 2018, 5:24 IST

ಹಗರಿಬೊಮ್ಮನಹಳ್ಳಿ: ವಿಧಾನಸಭಾ ಚುನಾವಣೆಗೆ ಗುರುವಾರ ಬಿಜೆಪಿ ಅಭ್ಯರ್ಥಿ ಕೆ.ನೇಮಿರಾಜ ನಾಯ್ಕ ಮತ್ತು ಪಕ್ಷೇತರ ಅಭ್ಯರ್ಥಿ ಎಲ್‌.ಪರಮೇಶ್ವರ ನಾಮಪತ್ರ ಸಲ್ಲಿಸಿದರು.

ರಾಜಯೋಗ ಮತ್ತು ಅಮೃತ ಘಳಿಗೆ ಇದೆ ಎನ್ನುವ ನಂಬಿಕೆಯೊಂದಿಗೆ ಬಿಜೆಪಿ ಅಭ್ಯರ್ಥಿ ಕೆ.ನೇಮಿರಾಜ ನಾಯ್ಕ ತಹಶೀಲ್ದಾರ್ ಕಚೇರಿವರೆಗೂ ವಾಹನದಲ್ಲಿ ಬಂದು ನಾಮಪತ್ರ ಸಲ್ಲಿಸಿ ತೆರಳಿದರು.

ಈ ಕುರಿತಂತೆ ಬಹುತೇಕ ಪಕ್ಷದ ಕಾರ್ಯಕರ್ತರಿಗೂ ಮಾಹಿತಿ ಇರಲಿಲ್ಲ. ಮತ್ತೇ ಏ.21ರಂದು ಪಕ್ಷದ ಅಪಾರ ಬೆಂಬಲಿಗರು, ಪಕ್ಷದ ವರಿಷ್ಠರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಮತ್ತೊಂದು ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ, ಮಂಡಲ ಅಧ್ಯಕ್ಷ ನರೇಗಲ್ಲು ಕೊಟ್ರೇಶ್‌, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ಪುರಸಭೆ ಸದಸ್ಯರಾದ ಹುಳ್ಳಿ ಮಂಜುನಾಥ, ಲಕ್ಷ್ಮಣ, ಮುಖಂಡರಾದ ಪದ್ಮಾ ವಿಠಲ್‌, ಪಿ.ರಾಜಲಿಂಗಪ್ಪ, ಬಿ.ಶ್ರೀನಿವಾಸ, ಸರ್ದಾರ್ ಯಮನೂರಪ್ಪ, ಬಿ.ಜಿ.ಬಡಿ ಗೇರ್‌, ಬಸವರಾಜ ಬಡಿಗೇರ್ ಇದ್ದರು.

ಆಸ್ತಿ ವಿವರ: ಬಿಜೆಪಿ ಅಭ್ಯರ್ಥಿ ಕೆ.ನೇಮಿರಾಜ ನಾಯ್ಕ ಅವರ 2017–18ರಲ್ಲಿ ಒಟ್ಟು ಆದಾಯ ₹ 13,01,354, ಅವರ ಬಳಿ ನಗದು ₹ 30,35,997 ಇದೆ. ₹ 26,23,731 ಮೌಲ್ಯದ ಇನ್ನೋವಾ, ₹ 20,14,500 ಹೊಂಡ ಸಿಆರ್‌ವಿ, ₹ 3,88,761 ಮಾರುತಿ ಜೆನ್ ಎಸ್ಟಿಲೋ ಕಾರು, ₹ 4,95,012 ಮೌಲ್ಯದ ಟ್ರ್ಯಾಕ್ಟರ್‌ ಹೊಂದಿದ್ದಾರೆ.

ಇವರ ಬಳಿ ₹ 6,20,204 ಅಂದಾಜು ಮೊತ್ತದ ಬಂಗಾರದ ಆಭರಣಗಳು, ₹ 1 ಲಕ್ಷ ಅಂದಾಜು ಮೊತ್ತದ ಬೆಳ್ಳಿಯ ವಸ್ತುಗಳು ಇವೆ. ಅವರ ಪತ್ನಿ ತವರು ಮನೆಯಿಂದ ಉಡುಗರೆಯಾಗಿ ತಂದ ₹ 7,50,000 ಮೌಲ್ಯದ 250ಗ್ರಾಂ ಬಂಗಾರದ ಆಭರಣಗಳು ಇವೆ ಎಂದು ಘೋಷಿಸಿಕೊಂಡಿದ್ದಾರೆ.

ಮರಿಯಮ್ಮನಹಳ್ಳಿ, ನಂದಿಬಂಡಿ, ಕೂಡ್ಲಿಗಿ ತಾಲ್ಲೂಕಿನ ಶಿವಪುರ ಮತ್ತು ಕುಪ್ಪನಕೇರಿ ಬಳಿ 17.85 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಮರಿಯಮ್ಮನಹಳ್ಳಿ ತಾಂಡಾದಲ್ಲಿ ಮನೆ, ಮರಿಯಮ್ಮನಹಳ್ಳಿಯಲ್ಲಿ ಖಾಲಿ ನಿವೇಶನ, ಹಗರಿಬೊಮ್ಮನಹಳ್ಳಿಯಲ್ಲಿ ನಿರ್ಮಿಸುತ್ತಿರುವ ಮನೆ ಮತ್ತು ಬೆಂಗಳೂರಿನ ಎಚ್‌.ಎಸ್.ಆರ್ ಲೇಔಟ್‌ನಲ್ಲಿ ಖಾಲಿ ನಿವೇಶನ ಇದೆ.

ಇಲ್ಲಿನ ಸಿಂಡಿಕೇಟ್ ಬ್ಯಾಂಕಿನಲ್ಲಿ ₹ 69ಲಕ್ಷ ಹೌಸಿಂಗ್ ಲೋನ್‌, ಕಾರಿಗಾಗಿ ₹ 20 ಲಕ್ಷ, ಹೊಸಪೇಟೆಯ ಅಹನಾ ಸೌಹಾರ್ದ ಕ್ರೆಡಿಟ್‌ ಕೋಅಪರೇಟಿವ್ ಬ್ಯಾಂಕಿನಲ್ಲಿ ₹ 50ಲಕ್ಷ ಸಾಲ ಪಡೆದುಕೊಂಡಿದ್ದೇನೆ ಎಂದು ಘೋಷಿಸಿಕೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಎಲ್.ಪರಮೇಶ್ವರ ಅವರು ಇಲ್ಲಿನ ಗಾಳೆಮ್ಮ ದೇವಸ್ಥಾನದಿಂದ ನೂರಾರು ಜನರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ಇವರ ಬಳಿ ಬ್ಯಾಂಕ್‌ ಗಳಲ್ಲಿರುವ ಎಲ್ಲ ಠೇವಣಿಗಳು ಸೇರಿ ₹ 20,67,305 ಇದೆ. ದಾವಣಗೆರೆಯಲ್ಲಿ ₹ 35ಲಕ್ಷ ಮೌಲ್ಯದ ಮನೆಯನ್ನು ಹೊಂದಿದ್ದಾರೆ.

ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯ್ತಿಸದಸ್ಯ ಎಲ್‌.ಮಂಜುನಾಥ, ಉಪನಾಯಕನಹಳ್ಳಿ ಹುಲುಗಪ್ಪ, ಕುರುಬರ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.