ಕೂಡ್ಲಿಗಿ: ಪತ್ರಿಕೆಯಲ್ಲಿ ಶನಿವಾರ ಪ್ರಕಟಗೊಂಡಿರುವ ‘ಬೀಡಿ ಕಟ್ಟುವವರ ಬವಣೆ’ ವಿಶೇಷ ವರದಿಗೆ ತಕ್ಷಣವೇ ಸ್ಪಂದಿಸಿರುವ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಬೀಡಿ ಕಾರ್ಮಿಕರ ಮಹಿಳಾ ಸಂಘವನ್ನು ರಚಿಸಿ, ಅವರಿಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ.
ಅಸಂಘಟಿತ ಮಹಿಳಾ ಬೀಡಿ ಕಾರ್ಮಿಕರಿಗೆ ಭವಿಷ್ಯದಲ್ಲಿ ಅನುಕೂಲ ಕಲ್ಪಿಸಲು ಸಂಘವನ್ನು ತಾವೇ ರಚಿಸಿ, ನೋಂದಣಿ ಮಾಡಿಸಿಕೊಡುವುದಾಗಿ ಅವರು ತಿಳಿಸಿದ್ದಾರೆ. ಮನೆ ಇಲ್ಲದೆ ನಿರ್ಗತಿಕರಾಗಿರುವ ನಾಲ್ಕು ಜನ ಫಲಾನುಭವಿ ಕಾರ್ಮಿಕರಿಗೆ ‘ನಮ್ಮ ಮನೆ’ ಯೋಜನೆಯಡಿಯಲ್ಲಿ ಮನೆ ಒದಗಿಸುವುದಾಗಿ ಹೇಳಿದ್ದಾರೆ.
ಪಡಿತರ ಚೀಟಿ ಇಲ್ಲದ ಕಾರ್ಮಿಕರಿಗೆ ಪಡಿತರ ಚೀಟಿ ಒದಗಿಸಿ, ಪಡಿತರ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಸರ್ಕಾರ ವಿವಿಧ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಕಾರ್ಮಿಕರ ನಿಧಿಯಿಂದ ಸಾಲ ಸೌಲಭ್ಯಗಳ ಅವಕಾಶವಿದ್ದು, ಶೀಘ್ರದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.
ಬೀಡಿ ಕಾರ್ಮಿಕರ ಕುಟುಂಬದಲ್ಲಿರುವ ವಿಧವೆಯರು, ವೃದ್ಧರಿಗೆ ಮಾಸಾಶನ ಒದಗಿಸಿಕೊಡುವುದಾಗಿ ಅವರು ದೂರವಾಣಿಯ ಮೂಲಕ ಮಹಿಳಾ ಬೀಡಿ ಕಾರ್ಮಿಕರಿಗೆ ತಿಳಿಸಿದ್ದಾರೆ.
ಶಾಸಕರ ಪರವಾಗಿ ಆವರ ಆಪ್ತ ಸಹಾಯಕ ಡಾ.ವೆಂಕಟಗಿರಿ ದಳವಾಯಿ, ಮಹಿಳಾ ಬೀಡಿ ಕಾರ್ಮಿಕರಿರುವ ಪ್ರದೇಶಕ್ಕೆ ತೆರಳಿ, ಶಾಸಕರ ಭರವಸೆಗಳನ್ನು ತಿಳಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಬಿಜೆಪಿ ಧುರೀಣ ನಜೀರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.