ADVERTISEMENT

ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ ಲಭ್ಯ: ಡಾ.ನರೇಂದ್ರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 5:10 IST
Last Updated 15 ಅಕ್ಟೋಬರ್ 2012, 5:10 IST

ಬಳ್ಳಾರಿ: ಮೊಣಕಾಲು ಚಿಪ್ಪಿನ ಸವೆತದಿಂದ ತೀವ್ರ ನೋವು ಅನುಭವಿಸುವವರಿಗೆ ಚಿಪ್ಪಿನ ಮರುಜೋಡಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಉನ್ನತ ಮಟ್ಟದ ಚಿಕಿತ್ಸಾ ಸೌಲಭ್ಯ ಬೆಂಗಳೂರಿನಲ್ಲಿ ಲಭ್ಯವಿದೆ ಎಂದು ಎಲುವು ಮತ್ತು ಮೂಳೆ ತಜ್ಞ, ನೋವಾ ಸ್ಪೆಷಲಿಟಿ ಸರ್ಜರಿ ಸಂಸ್ಥೆಯ ಡಾ.ನರೇಂದ್ರ ರಂಗಪ್ಪ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮನುಷ್ಯನ ದೇಹದ ಮೂಳೆಗಳಲ್ಲಿರುವ ಬೋನ್ ಮಾರೋದಲ್ಲಿನ ಕಾಂಡಕೋಶಗಳ (ಸ್ಟೆಮ್ ಸೆಲ್ಸ್) ಸಹಕಾರದಿಂದ ಪ್ರತಿಯೊಂದು ಅವಯವದ ಬೆಳವಣಿಗೆ ಸಾಧ್ಯ. ಕಾಂಡಕೋಶದ ನೆರವಿನಿಂದಲೇ ಸವೆತಕ್ಕೆ ಒಳಗಾದ ಚಿಪ್ಪಿನ ಬೆಳವಣಿಗೆ  ಕುರಿತ ಚಿಕಿತ್ಸೆ ನೀಡಿ, ನೋವು ನಿವಾರಿಸಲಾಗುವುದು ಎಂದು ಅವರು ಹೇಳಿದರು.

ಯೇಮನ್ ದೇಶದ ಅಬಿಯಾ ನೊಬ್ಡಾ ಫರಾ ಎಂಬ 65 ವರ್ಷ ವಯಸ್ಸಿನ ವೃದ್ಧೆಯೊಬ್ಬರಿಗೆ ಕಳೆದ ವರ್ಷ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಮೊಣಕಾಲಿನ ಚಿಪ್ಪುಗಳ ಸವೆತ ಮತ್ತು ಮೊಣಕಾಲಿನ ಚಿಪ್ಪಿನ ಮೂಳೆ ಮುರಿತದಂದಾಗಿ ಗಾಲಿ ಕುರ್ಚಿಯಲ್ಲಿ ಓಡಾಡುತ್ತಿದ್ದ ಅವರು ಇದೀಗ ಸಾಮಾನ್ಯರಂತೆ ಓಡಾಡುತ್ತಿದ್ದಾರೆ.

1ರಿಂದ 1.25 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಶಸ್ತ್ರಚಿಕಿತ್ಸೆ ಸೌಲಭ್ಯವನ್ನು ಬೆಂಗಳೂರಿನ ನೋವಾ ಸ್ಪೆಷಲಿಟಿ ಸರ್ಜರಿಯ ವೈದ್ಯಕೀಯ ಕೇಂದ್ರದಲ್ಲಿ ನೀಡಲಾಗಿದೆ ಎಂದ ಅವರು ವಿವರಿಸಿದರು. ಮುಖ್ಯವಾಗಿ ಕಾಂಡಕೋಶದ ಕುರಿತು ಜನಜಾಗೃತಿ ಮೂಡಿಸುವ ಮೂಲಕ, ಮಂಡಿ ಚಿಪ್ಪಿನ ಶಸ್ತ್ರಚಿಕಿತ್ಸೆ ಹಾಗೂ ಕೃತಕ ರೋಟೆಟಿಂಗ್ ಪ್ಲ್ಯಾಟ್‌ಫಾರ್ಮ್ ಅಳವಡಿಕೆ ಸೇರಿದಂತೆ ವಿವಿಧ ರೀತಿಯ ಎಲುವು, ಮೂಳೆಗಳ ಶಸ್ತ್ರಚಿಕಿತ್ಸೆ ಸೌಲಭ್ಯ ಲಭ್ಯವಿದೆ ಎಂಬುದನ್ನು ತಿಳಿಸಲಾಗುತ್ತಿದೆ.

ಮಂಡಿ ಚಿಪ್ಪಿನ ಮರುಜೋಡಣೆ ಮಾಡಿಸಿಕೊಂಡಿರುವ ಅನೇಕರು ಯೋಗವನ್ನೂ ಮಾಡುವಂತಾಗಿರುವುದು ವಿಶೇಷ ಎಂದು ಡಾ.ನರೇಂದ್ರ ತಿಳಿಸಿದರು. ನೀಲಿ ರಕ್ತ ಕಣಗಳಿಂದಾಗಿ (ವೆರಿಕೋಸ್ ವೇಯ್ನ್ಸ) ಸಮಸ್ಯೆ ಮತ್ತು ಡೀಪ್ ವೇಯ್ನ ತ್ರೊಂಬೋಸಿಸ್ ಸಮಸ್ಯೆಗೆ ಒಳಗಾದವರಿಗೂ ಲೇಸರ್ ಶಸ್ತ್ರಚಿಕಿತ್ಸೆ ಸೌಲಭ್ಯ ನೀಡಲಾಗುತ್ತಿದೆ ಎಂದು ಡಾ. ಎಸ್.ಎಚ್. ಮಮತಾ ತಿಳಿಸಿದರು.

ನಗರದಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ ಹಾಗೂ ಡಾ.ಎಸ್.ಕೆ. ಪಾಂಡುರಂಗರಾವ್ ಅವರ ಆಸ್ಪತ್ರೆಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅನೇಕ ದಿನಗಳಿಂದ ಮೊಣಕಾಲು (ನೀ), ಸಂದು (ಜಾಯಿಂಟ್)ಗಳಿಗೆ ಸಂಬಂಧಿಸಿದ ನೋವು ಅನುಭವಿಸುತ್ತಿರುವವರು ಸಂಪರ್ಕಿಸಬಹುದು ಎಂದು ಅವರು ಕೋರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.