ADVERTISEMENT

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಚೆ ಸೇವಕರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 4:25 IST
Last Updated 17 ಅಕ್ಟೋಬರ್ 2012, 4:25 IST
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಚೆ ಸೇವಕರ ಮುಷ್ಕರ
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಚೆ ಸೇವಕರ ಮುಷ್ಕರ   

ಕೂಡ್ಲಿಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಅಂಚೆ ಇಲಾಖೇತರ ನೌಕರರ ಸಂಘದ ವತಿಯಿಂದ ತಾಲ್ಲೂಕಿನ ಗ್ರಾಮೀಣ ಅಂಚೆ ಸೇವಕರು ಮಂಗಳವಾರದಿಂದ ಪಟ್ಟಣದ ಅಂಚೆ ಇಲಾಖೆ ಕಚೇರಿಯ ಮುಂದೆ ಅನಿರ್ದಿಷ್ಟ ಅವಧಿಯ ಮುಷ್ಕರ ಆರಂಭಿಸಿದ್ದಾರೆ.

ತಾಲ್ಲೂಕಿನಾದ್ಯಂತ 128 ಜನ ಗ್ರಾಮೀಣ ಅಂಚೆ ಸೇವಕರಿದ್ದು, ತಮ್ಮನ್ನು ಖಾಯಂ ನೌಕರರನ್ನಾಗಿ ಮಾಡಬೇಕೆಂ ಬುದು ಪ್ರಮುಖ ಬೇಡಿಕೆಗಳಲ್ಲೊಂದು ಎಂದು ಸಂಘದ ಬನ್ನೇಶ ತಿಳಿಸಿದ್ದಾರೆ.ಇಲಾಖೆಯ ನೌಕರರಿಗೆ ಕೊಡುವ 3,500 ರೂ ಬೋನಸ್ ಕೊಡಬೇಕು. ಅನುಕಂಪದ ಆಧಾರದ ಮೇಲೆ ತೆಗೆದುಕೊಳ್ಳುವ ನೌಕರರಿಗೆ ಈಗಿರುವ ಪದ್ಧತಿ ಕೈಬಿಟ್ಟು ಹಿಂದಿನಂತೆ ಎ್ಲ್ಲಲ ವಾರಸುದಾರರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಲಾಯಿತು.

ಅಂಚೆ ಪೇದೆ ಮೇಲ್ ಗಾರ್ಡ ಮತ್ತು ಎಂಟಿಎಸ್ ಕೆಲಸಕ್ಕೆ ಜಿಡಿಎಸ್ ನೌಕರರನ್ನು ಸೇವಾ ಜೇಷ್ಠತೆಯ ಆಧಾರದ ಮೇಲೆ ನೇಮಕ ಮಾಡಬೇಕು. ಜಿಡಿಎಸ್ ನೌಕರರ ಖಾಲಿ ಹುದ್ದೆಗಳನ್ನು ರ್ದ್ದದುಪಡಿಸದೇ ಶೀಘ್ರವಾಗಿ ನೇಮಕಾತಿ ಮಾಡಬೇಕು. ವೇತನ ಕಡಿತ ನಿಲ್ಲಿಸಬೇಕು. ಆರ್‌ಎಸ್‌ಬಿವೈನ್ನು ತಕ್ಷಣ ಜಾರಿಗೆ ತರಲು ಕ್ಯಾಬಿನೆಟ್ ಮಂಜೂರಾತಿ ಪಡೆದುಕೊಳ್ಳಬೇಕು. ದಿನಗೂಲಿ ನೌಕರರಿಗೆ 2006ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಿ ಎಲ್ಲ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು. 

ಮುಷ್ಕರದಲ್ಲಿ ತಾಲ್ಲೂಕಿನ ವಿವಿಧ ಗ್ರಾಮೀಣ ಭಾಗದ ಅಂಚೆ ಸೇವಕರಾದ ಕೆ.ಮೌನೇಶ, ಜೆ.ಕೆ.ಈಶಪ್ಪ, ಬಿ.ರುದ್ರಪ್ಪ, ಡಿ.ಆಶಾಲತಾ, ಆರ್.ವಿ.ಬಸವರಾಜ, ಎಚ್.ಕಾಳಮ್ಮ, ಎನ್.ಜೆ.ನಾಗರತ್ನ, ಕೆ.ಬಿ.ತ್ರಿವೇಣಿ, ಜೆ.ನಿರ್ಮಲ, ವಿ.ಬಿ. ಪರಶುರಾಮ, ಜಲಜಾಕ್ಷಿ, ಕೆ. ಮಂಜುನಾಥ, ಬಿ.ಎಸ್.ನರನೂರ, ಪದ್ಮಾವತಿ, ಎ.ಕೆ.ಶಿವರಾಜ, ಸಿ. ಮಂಜು ನಾಥ, ಜೆ.ಎಂ.ಸಿ.ರಾಜು, ಪಿ. ಬಸವ ರಾಜ, ಟಿ.ಮೊಹಿನುದ್ದೀನ ಮುಂತಾದ ವರು ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಕಂಪ್ಲಿಯಲ್ಲಿಯೂ ಮುಷ್ಕರ
ಅಖಿಲ ಭಾರತ ಅಂಚೆ ಇಲಾಖೇತರ ನೌಕರರ ಸಂಘ (ಜಿಡಿಎಸ್) ಕರೆ ನೀಡಿರುವ ಅನಿರ್ದಿಷ್ಟ ಮುಷ್ಕರ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯ ಗ್ರಾಮೀಣ ಅಂಚೆ ಸೇವಕರು ಮತ್ತು ಗ್ರಾಮೀಣ ಡಾಕ್ ಸೇವಕರು ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಮಂಗಳವಾರ ಅಂಚೆ ಗ್ರಾಹಕರು ತೊಂದರೆ ಅನುಭವಿಸಬೇಕಾಯಿತು.

ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಮತ್ತು ಜಸ್ಟಿಸ್ ತಲವಾರ್ ಸಮಿತಿ ವರದಿ ಅನುಸಾರ ಗ್ರಾಮೀಣ ಅಂಚೆ ಸೇವಕರನ್ನು ಕಾಯಂ ಮಾಡಬೇಕು. ಇಲಾಖೆಯ ನೌಕರರಿಗೆ ಕೊಡುವ ಬೋನಸ್ ನೀಡುವುದು ಸೇರಿದಂತೆ ಎಂಟು ಅಂಶಗಳ ಬೇಡಿಕೆಯನ್ನು ಈಡೇರಿಕೆಗಾಗಿ ಗ್ರಾಮೀಣ ಅಂಚೆ ಸೇವಕರು ಬಳ್ಳಾರಿಗೆ ತೆರಳಿದ್ದರಿಂದ ಅಂಚೆ ಸೇವೆ ಸಂಪೂರ್ಣ ಸ್ಥಗಿತಗೊಂಡಿತ್ತು.

ಪಟ್ಟಣದ ಪ್ರಧಾನ ಅಂಚೆ ಕಚೇರಿಯಿಂದ ಪೋಸ್ಟ್ ಚೀಲಗಳನ್ನು ತೆಗೆದುಕೊಂಡು ಹೋಗಿ ಬಟವಾಡೆ ಮಾಡಬೇಕಾಗಿತ್ತು.ಆದರೆ, ಮುಷ್ಕರಕ್ಕೆ ತೆರಳಿದ್ದರಿಂದ ಬಹುತೇಕ ಪೋಸ್ಟ್ ಚೀಲಗಳು ಕಚೇರಿಯಲ್ಲಿ ಬಿದ್ದಿದ್ದವು. ಇದರಿಂದ ಪತ್ರ, ನೋಂದಣಿ ಪತ್ರ, ಮಾಸಾಶನ ನಿರೀಕ್ಷೆಯಲ್ಲಿ ಇದ್ದವರಿಗೆ ಅಡಚಣೆ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.