ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹ: ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 5:26 IST
Last Updated 3 ಜುಲೈ 2013, 5:26 IST

ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಸಮಿತಿ ಸದಸ್ಯರು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವೇತನ ಆಯೋಗವು 2012ರಲ್ಲಿ ಸಲ್ಲಿಸಿರುವ ಶಿಫಾರಸುಗಳ ಅನ್ವಯ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆ ಯನ್ನು ಪರಿಷ್ಕರಿಸಿದ ಸಂದರ್ಭ ಅಂದಿನ ಸರ್ಕಾರ ಏಕಪಕ್ಷೀಯವಾಗಿ ಕೇವಲ ಶೇ 22.5ರಷ್ಟು  ವೇತನ  ಹೆಚ್ಚಳ ಮಾಡಿದೆ.

ಇದರಿಂದ ವೇತನ ಭತ್ಯೆ ಪರಿಷ್ಕರಿ ಸುವುದರಿಂದ ಕೇಂದ್ರ ಸರ್ಕಾರಿ, ರಾಜ್ಯ ಸರ್ಕಾರಿ ನೌಕರರು ಹಾಗೂ ಇತರೆ ರಾಜ್ಯಗಳ ಸರ್ಕಾರಿ ನೌಕರರ ನಡುವಿನ ವೇತನ ತಾರತಮ್ಯ ಪರಿಹಾರವಾಗದೆ ಮುಂದುವರಿದಿದೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯ ಸರಿ ಪಡಿಸಲು ರಾಜ್ಯ ಸರ್ಕಾರ ಇನ್ನೂ ಶೇ 18ರಷ್ಟು ವೇತನ ಹೆಚ್ಚಿಸಬೇಕು. ಸರ್ಕಾರವು ತುಟ್ಟಿ ಭತ್ಯೆ ಸೂತ್ರವನ್ನೂ ಬದಲಾಯಿಸುವುದರಿಂದ ರಾಜ್ಯ ಸರ್ಕಾರಿ ನೌಕರರಿಗೆ ಕಡಿಮೆ ತುಟ್ಟಿಭತ್ಯೆ ಲಭ್ಯವಾಗುತ್ತಿದೆ. ಈ ನ್ಯೂನತೆ ಸರಿಪಡಿಸಿ, ತುಟ್ಟಿಭತ್ಯೆ ಪ್ರಮಾಣ ಬದ ಲಾಯಿಸಬೇಕು. ಕೇಂದ್ರ ಸರ್ಕಾರದ ಮಾದರಿಯಂತೆ ನಗರಗಳ ವರ್ಗೀಕರಣ ಮತ್ತು ಮನೆ ಬಾಡಿಗೆ ದರವನ್ನು ಹೆಚ್ಚಿಸ ಬೇಕು.

ಮಕ್ಕಳ ಶಿಕ್ಷಣ ಶುಲ್ಕವನ್ನು ಹಿಂದಿರುಗಿಸಬೇಕು. ಗುತ್ತಿಗೆ ಹಾಗೂ ಹೊರಗುತ್ತಿಗೆ ನೇಮಕಾತಿಗಳನ್ನು ತಡೆ ಹಿಡಿದು, ಖಾಲಿ ಇರುವ 1.5 ಲಕ್ಷ ಹುದ್ದೆಗಳಿಗೆ ಕಾಯಂ ನೇಮಕಾತಿ ನಿಯಮಗಳಂತೆ ಭರ್ತಿ ಮಾಡಬೇಕು. ಹೊಸ ಪಿಂಚಣಿ ನೀತಿಯನ್ನು ರದ್ದು ಗೊಳಿಸಿ, ಈ ಹಿಂದಿನಂತೆಯೇ ನಿಶ್ಚಿತ ಪಿಂಚಣಿ ನೀತಿಯನ್ನು ಜಾರಿಗೊಳಿಸ ಬೇಕು ಎಂಬ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ಗುರುಸಿದ್ಧ ಮೂರ್ತಿ, ಸಂಘಟನಾ ಕಾರ್ಯದರ್ಶಿ ಮಂಜುಳಾ, ಆಲಂ ಬಾಷಾ, ಗುರುಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.