ADVERTISEMENT

ಭತ್ತಕ್ಕೆ ಉತ್ತಮ ಬೆಲೆ: ರೈತನ ಮುಖದಲ್ಲಿ ಮಂದಹಾಸ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2012, 5:50 IST
Last Updated 29 ಫೆಬ್ರುವರಿ 2012, 5:50 IST
ಭತ್ತಕ್ಕೆ ಉತ್ತಮ ಬೆಲೆ: ರೈತನ ಮುಖದಲ್ಲಿ ಮಂದಹಾಸ
ಭತ್ತಕ್ಕೆ ಉತ್ತಮ ಬೆಲೆ: ರೈತನ ಮುಖದಲ್ಲಿ ಮಂದಹಾಸ   

ಬಳ್ಳಾರಿ: ಬರಗಾಲ, ಇಳುವರಿ ಕೊರತೆ, ಹತ್ತಿ, ಮೆಣಸಿನಕಾಯಿ ಮತ್ತಿತರ ಬೆಳೆಗಳ ದರ ಕುಸಿತದಿಂದ ಜಿಲ್ಲೆಯ ಬಹುತೇಕ ಕೃಷಿಕರು ಕಂಗಾಲಾಗಿದ್ದರೆ, ಒಂದು ವಾರದಿಂದ ಹೆಚ್ಚಳ ಕಂಡಿರುವ ಸೋನಾ ಮಸೂರಿ ಭತ್ತದ ಧಾರಣೆ ಕಂಡು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

2011ರ ಡಿಸೆಂಬರ್‌ನಲ್ಲಿ ಕಟಾವು ಮಾಡಿರುವ ಸೋನಾ ಮಸೂರಿ ಭತ್ತಕ್ಕೆ ಕ್ವಿಂಟಲ್‌ಗೆ ರೂ 1,500 ದೊರೆಯುತ್ತಿದ್ದರೆ 2010ರ ಡಿಸೆಂಬರ್‌ನಲ್ಲಿ ಕಟಾವಾಗಿ ದಾಸ್ತಾನು ಮಾಡಿರುವ ಹಳೆಯ ಬತ್ತಕ್ಕೆ ರೂ 1,900 ದರ ದೊರೆಯುತ್ತಿದೆ. ಈ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಜಿಲ್ಲೆಯ ಸಿರುಗುಪ್ಪ, ಹೊಸಪೇಟೆ ಮತ್ತು ಬಳ್ಳಾರಿ ತಾಲ್ಲೂಕಿನ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸೋನಾ ಮಸೂರಿ ಭತ್ತ ಬೆಳೆದಿರುವ ಬಹುತೇಕ ರೈತರು ಕಳೆದ ಡಿಸೆಂಬರ್ ಅಂತ್ಯಕ್ಕೆ ಬತ್ತ ಕಟಾವು ಮಾಡಿದ್ದು, ಅರ್ಧಕ್ಕಿಂತ ಹೆಚ್ಚು ರೈತರು ಈಗಾಗಲೇ ಭತ್ತವನ್ನು ಮಾರಾಟ ಮಾಡಿದ್ದಾರೆ. ಉತ್ತಮ ದರದ ನಿರೀಕ್ಷೆಯಲ್ಲಿ ಭತ್ತ ದಾಸ್ತಾನು ಮಾಡಿದ್ದ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ರೈತರಿಗೆ ಉತ್ತಮ ದರ ದೊರೆಯುತ್ತಿದ್ದು, ಅವರು ಹರ್ಷಗೊಂಡಿದ್ದಾರೆ.

ಜನವರಿ ಹಾಗೂ ಫೆಬ್ರುವರಿ ಮಧ್ಯ ಭಾಗದವರೆಗೆ ಪ್ರತಿ ಕ್ವಿಂಟಲ್‌ಗೆ 1,100-1200 ರೂಪಾಯಿಷ್ಟಿದ್ದ   ಭತ್ತದ ದರ ಒಂದು ವಾರದಿಂದ ಬೇಡಿಕೆಗೆ ಅನುಗುಣವಾಗಿ ಹೆಚ್ಚಳವಾಗಿದೆ. ಸೋಮವಾರ ಸಿರುಗುಪ್ಪದ ಮಾರುಕಟ್ಟೆಯಲ್ಲಿ ರೂ 1500 ನಿಗದಿಯಾಗಿತ್ತು.

ಆರು ತಿಂಗಳ ಅವಧಿಯ ಸೋನಾ ಮಸೂರಿ ಭತ್ತ ಬೆಳೆಯಲು ಪ್ರತಿ ಎಕರೆಗೆ 20,000-25,000 ರೂಪಾಯಿ  ಖರ್ಚು ಆಗುತ್ತದೆ. ಬಹುತೇಕ ಚಿಕ್ಕ ಹಿಡುವಳಿದಾರರು ಈಗಾಗಲೇ ಭತ್ತವನ್ನು ಮಾರಾಟ ಮಾಡಿದ್ದು, ಅವರಿಂದ ಖರೀದಿಸಿ, ದಾಸ್ತಾನು ಮಾಡಿರುವ ಮಧ್ಯವರ್ತಿಗಳಿಗೆ ದರ ಹೆಚ್ಚಳದಿಂದ ಹೆಚ್ಚು ಲಾಭವಾಗಲಿದೆ.

`ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಹೆಚ್ಚುತ್ತಿದ್ದ ಭತ್ತದ ದರ ಈ ಬಾರಿ ಎರಡು ತಿಂಗಳು ಮುಂಚೆಯೇ ಹೆಚ್ಚಳ ಕಂಡಿದೆ. ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿಯ ದರವೂ ಹೆಚ್ಚಲಿದ್ದು, ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸಲಿದೆ~ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಜಿ. ಬಸವರಾಜಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.