ADVERTISEMENT

ಮಕ್ಕಳ ಹಕ್ಕುಗಳ ರಕ್ಷಣೆ: ಜಾಗೃತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:28 IST
Last Updated 12 ಡಿಸೆಂಬರ್ 2013, 8:28 IST

ಹೊಸಪೇಟೆ: ನಗರದ 9ನೇ ವಾರ್ಡಿನ ಸಿದ್ಧಲಿಂಗಪ್ಪ ಚೌಕಿಯಲ್ಲಿ ನಗರದ ಡಾನ್ ಬಾಸ್ಕೊ ತರುಣಿ ಸಂಸ್ಥೆ, ಟಿ.ಡಿ.ಎಚ್(ಜಿ) ಮತ್ತು ಬಳ್ಳಾರಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ‘ಮಕ್ಕಳ ಹಕ್ಕುಗಳ ರಕ್ಷಣೆ’ ಕುರಿತು ಬುಧವಾರ ಜಾಗೃತಿ ಶಿಬಿರ ಆಯೋಜಿಸಲಾಗಿತ್ತು.

ಸಹಾಯಕ ಶಿಶು ಯೋಜನಾಧಿಕಾರಿ ಪರಮೇಶ್ವರ,  ‘ಬಾಲ್ಯ ವಿವಾಹ ಒಂದು ಶಿಕ್ಷಾರ್ಹ ಅಪ­ರಾಧ. ಬಾಲ್ಯದಲ್ಲಿ ಹೆಣ್ಣು ಮಕ್ಕಳಿಗೆ ವಿವಾಹ ಮಾಡದೇ ಅವರಿಗೆ ಸೂಕ್ತ ಶಿಕ್ಷಣ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳಾಗಿ ಮಾಡಬೇಕು’ ಎಂದರು. ‘ಮಕ್ಕಳಿಗೆ ತಮ್ಮದೇ ಆದ ಹಕ್ಕುಗಳಿವೆ. ಮಕ್ಕಳು ಆ ಹಕ್ಕುಗಳನ್ನು ಪಡೆದು ಸುಂದರವಾದ ಬದುಕನ್ನು ಅನುಭವಿಸಲು ಸಹಕಾರ ಮತ್ತು ಪ್ರೋತ್ಸಾಹ ಕೊಡುವುದು ಪೋಷಕರ ಕರ್ತವ್ಯ’ ಎಂದು ಹೇಳಿದರು.

ಬಳ್ಳಾರಿ ಜಿಲ್ಲಾ ಮಕ್ಕಳ ರಕ್ಷಣ ಘಟಕ ಮುಖ್ಯಸ್ಥೆ ಕಲಾವತಿ, ತರುಣಿ ಸಂಸ್ಥೆ ಅಧ್ಯಕ್ಷೆ ಸಾವಿತ್ರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಾರ್ಡಿನ ಸದಸ್ಯೆ ನೂರ್‌ಜಹಾನ್‌, ಅಂಗನವಾಡಿ ಮೇಲ್ವಿಚಾರಕಿ ಶಮೀಮ, ಡಾನ್ ಬಾಸ್ಕೊ ಸಂಸ್ಥೆಯ ಸಂಯೋಜಕಿ ಸಿಸ್ಟರ್ ಸೀಮಾ ಸೇರಿದಂತೆ ಮಹಿಳಾ ಸ್ವಸಹಾಯ ಸಂಘದ 40 ಮಹಿಳೆಯರು ಪಾಲ್ಗೊಂಡಿದ್ದರು.

‘ಲಿಂಗಪೂಜೆಯಿಂದ ನೆಮ್ಮದಿ’
ಕೊಟ್ಟೂರು: ಲಿಂಗಪೂಜೆ ಯಾವುದೇ ಒಂದು ಜಾತಿ , ಧರ್ಮಕ್ಕೆ ಸೀಮಿತವಾದುದ್ದಲ್ಲ . ಪ್ರತಿಯೊಬ್ಬರು ಲಿಂಗಪೂಜೆಯಿಂದ ಮಾನಸಿಕ ನೆಮ್ಮದಿ ಪಡೆಯಬಹುದು ಎಂದು ಲಿಂಗಾಯತ ಪಂಚಮಸಾಲಿ  ಬಸವಜಯ ಮೃತ್ಯುಂಜಯ ಸ್ವಾಮೀಜಿ  ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಪಂಪಾಪತಿ ಅಂಗಡಿ ನಿವಾಸದಲ್ಲಿ ‘ಮನೆ–ಮನದಲ್ಲಿ ಕೂಡಲ ಸಂಗಮ’ ಎಂಬ ಕಾರ್ಯ­ಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ವೀರಶೈವ ಪಂಚಮಶಾಲಿ ಪೀಠ ಮತ್ತು ಲಿಂಗಾಯಿತ ಪಂಚಮಶಾಲಿ ಪೀಠ ಎರಡು ಕಣ್ಣುಗಳಿದ್ದಂತೆ ಎಂದರು.

ಮುಖಂಡರಾದ ದೇವರಮನಿ ಶಿವಚರಣ, ಗುಳಿಗಿ ವೀರೇಂದ್ರ, ಶಿವಣ್ಣ, ನಾಗೇಶ್‌, ನಂಜನಗೌಡ, ಚಟ್ರಕಿ ಬಸವರಾಜ್‌, ಪಂಪಾಪತಿ ಅಂಗಡಿ, ಭರಮನಗೌಡ ಪಾಟೀಲ್‌, ವಿವೇಕಾನಂದ ಮಾತನಾ­ಡಿದರು. ರೇಣುಕಾಚಾರ್ಯ ವಿದ್ಯಾಸಂಸ್ಧೆಯ ಕಾರ್ಯ­ದರ್ಶಿ ಟಿ.ಎಂ. ಸಣ್ಣಕೊಟ್ರಯ್ಯ ಅವರನ್ನು ಸನ್ಮಾನಿಸ­ಲಾಯಿತು. ಪಂಪಾಪತಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT