ADVERTISEMENT

ಮನೆ ತೆರವು ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2013, 5:49 IST
Last Updated 17 ಜನವರಿ 2013, 5:49 IST
ಮನೆ ತೆರವು ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ
ಮನೆ ತೆರವು ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ   

ಮರಿಯಮ್ಮನಹಳ್ಳಿ: ಸಮೀಪದ ಗುಂಡಾ ರೈಲು ನಿಲ್ದಾಣ ಗ್ರಾಮದಲ್ಲಿ ಈಗಾಗಲೇ ಕೆಐಎಡಿಬಿಗೆ ಹಸ್ತಾಂತರಗೊಂಡ ಜಾಗೆಯಲ್ಲಿ ನಿರ್ಮಿಸಿದ ಮನೆಗಳನ್ನು ಏಕಾಏಕಿ ಜೆಸಿಬಿ ಯಂತ್ರಗಳ ಸಹಾಯದಿಂದ  ತೆರವುಗೊಳಿಸಿದ್ದನ್ನು ಖಂಡಿಸಿ ಗ್ರಾಮಸ್ಥರು ಹಾಗೂ ರೈತ ಸಂಘದ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಸರ್ವೆ ನಂ.17/ಬಿ ಜಾಗೆಯಲ್ಲಿನ 24 ಮನೆಗಳ ಮಾಲೀಕರಿಗೆ ಮಂಗಳವಾರವಷ್ಟೇ ನೋಟಿಸ್ ನೀಡಲಾಗಿತ್ತು. ಆದರೆ ಬುಧವಾರ ಬೆಳಿಗ್ಗೆ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಮನೆಗಳನ್ನು ಕೆಡೆವಿದ್ದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಡಣಾಪುರ ಗ್ರಾ.ಪಂ. ವ್ಯಾಪ್ತಿಗೆ ಬರುವ ಗ್ರಾಮದಲ್ಲಿ  ಸುಮಾರು 58 ಮನೆಗಳಿದ್ದು, ಒಟ್ಟು ವಿಸ್ತೀರ್ಣ 6.81ಎಕರೆ ಹೊಂದಿದೆ, ಅದರಲ್ಲಿ ಎರಡು ಎಕರೆ ಪಟ್ಟಾಭೂಮಿ ಹೊಂದಿದ್ದು, ಉಳಿದ ಭೂಮಿ ಈಗಾಗಲೇ ಕೆಐಎಡಿಬಿಗೆ ಹಸ್ತಾಂತರಗೊಂಡಿದ್ದು, ಪಕ್ಕದ ಬಿಎಂಎಂ ಕಾರ್ಖಾನೆಗೆ ನೀಡಲಾಗಿದೆ. ಈಗ ಸರ್ವೆ ನಂ.17/ಬಿ  ನಲ್ಲಿನ ಸರ್ಕಾರಿ ಸ್ಥಳದಲ್ಲಿ ಸುಮಾರು 24 ಮನೆಗಳನ್ನು ಜೆಸಿಬಿಗಳ ಸಹಾಯದಿಂದ ನೆಲಕ್ಕುರುಳಿಸಲಾಯಿತು.

ನೋಟಿಸ್‌ನಲ್ಲಿ ಎರಡು ದಿನಗಳ ಕಾಲಾವಕಾಶ ನೀಡಿದ್ದರೂ, ಮನೆಗಳಲ್ಲಿನ ಸಾಮಗ್ರಿ, ಸರಂಜಾಮುಗಳನ್ನು ತೆಗೆದುಕೊಂಡು ಹೋಗಲು ಸಹ ಅವಕಾಶ ನೀಡದೆ, ದೌರ್ಜನ್ಯವೆಸಗಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಸುಮಾರು ವರ್ಷಗಳಿಂದ ಬಾಳಿ ಬದುಕಿದ ಗ್ರಾಮ ಬಿಟ್ಟು ಕದಲುವುದಿಲ್ಲ ಎಂದು ಜನರು ಪಟ್ಟು ಹಿಡಿದರು.

`ಎಂಟು ತಿಂಗಳ ಹಿಂದೆ ಈ ಜಾಗೆಯು ಕೆಐಎಡಿಬಿಗೆ ಹಸ್ತಾಂತರಗೊಂಡಿದ್ದು, ನಿಮಗಾಗಿ ಕಾರ್ಖಾನೆಯವರು ಹನುಮನಹಳ್ಳಿ ಬಳಿ ಟೌನ್‌ಶಿಪ್‌ನಲ್ಲಿ ಮನೆಗಳನ್ನು ನಿರ್ಮಿಸಿದ್ದಾರೆ. ಅಲ್ಲಿಗೆ ಹೋಗದೇ ಹೀಗೆ ಮಾಡುವುದು ಸರಿಯಲ್ಲ. ಜನ ಬಯಸಿದರೆ ಸಭೆ ನಡೆಸಿ, ಬೇರೆ ರೀತಿಯ ಉದ್ಯೋಗ, ಜಾಗ ಇತರೆ ಸೌಲಭ್ಯಗಳನ್ನು ಒದಗಿಸ ಲಾಗುವುದು' ಎಂದು ಉಪ ವಿಭಾಗಾಧಿಕಾರಿ ಡಿ.ಆರ್. ಅಶೋಕ್ ಭರವಸೆ ನೀಡಿದರು.

ನಂತರ ಗ್ರಾಮಸ್ಥರು ಸಭೆಗೆ ಬರಲು ಒಪ್ಪಿಕೊಂಡರು. ಆದರೂ ಅಲ್ಲಿಯವರೆಗೆ ಗ್ರಾಮದಲ್ಲಿಯೇ ನೆಲೆಸುವುದಾಗಿ ಹೇಳಿದರು. ತಹಶೀಲ್ದಾರ್ ಬಸವರಾಜ ಸೋಮಣ್ಣನವರ, ಡಿವೈಎಸ್‌ಪಿ  ಪಿ.ಡಿ. ಗಜಾಕೋಶ, ಸಿಪಿಐ ಅಶೋಕ್‌ಕುಮಾರ್ ಸೇರಿದಂತೆ ರೈತ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.