ADVERTISEMENT

`ಮಹಾಂತ ಶ್ರೀಗಳ ಚಿಂತನೆ ಆದರ್ಶಪ್ರಾಯ'

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2013, 7:13 IST
Last Updated 18 ಫೆಬ್ರುವರಿ 2013, 7:13 IST
ವೀರಶೈವ ಪಂಚಮಸಾಲಿ ಹರಿಹರ ಪೀಠದ ಜಗದ್ಗುರುಗಳ ಪೀಠಾರೋಹಣದ 5ನೇ ವಾರ್ಷಿಕೋತ್ಸವದ ಅಂಗವಾಗಿ ಹಗರಿಬೊಮ್ಮನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಡಾ.ಮಹಾಂತ ಸ್ವಾಮಿಗಳ ನುಡಿನಮನ ಸಮಾರಂಭದಲ್ಲಿ , ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು. ಸಿದ್ಧಲಿಂಗ ಮಹಾಸ್ವಾಮೀಜಿ, ಬಿ.ಸಿ.ಉಮಾಪತಿ, ಶಿವರಾಮೇಗೌಡ, ಬಾವಿ ಬೆಟ್ಟಪ್ಪ, ಬೊಪ್ಪಕಾನ್ ಕುಮಾರಸ್ವಾಮಿ, ಅಕ್ಕಿ ಶಿವಕುಮಾರ್ ಚಿತ್ರದಲ್ಲಿದ್ದಾರೆ
ವೀರಶೈವ ಪಂಚಮಸಾಲಿ ಹರಿಹರ ಪೀಠದ ಜಗದ್ಗುರುಗಳ ಪೀಠಾರೋಹಣದ 5ನೇ ವಾರ್ಷಿಕೋತ್ಸವದ ಅಂಗವಾಗಿ ಹಗರಿಬೊಮ್ಮನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಡಾ.ಮಹಾಂತ ಸ್ವಾಮಿಗಳ ನುಡಿನಮನ ಸಮಾರಂಭದಲ್ಲಿ , ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು. ಸಿದ್ಧಲಿಂಗ ಮಹಾಸ್ವಾಮೀಜಿ, ಬಿ.ಸಿ.ಉಮಾಪತಿ, ಶಿವರಾಮೇಗೌಡ, ಬಾವಿ ಬೆಟ್ಟಪ್ಪ, ಬೊಪ್ಪಕಾನ್ ಕುಮಾರಸ್ವಾಮಿ, ಅಕ್ಕಿ ಶಿವಕುಮಾರ್ ಚಿತ್ರದಲ್ಲಿದ್ದಾರೆ   

ಹಗರಿಬೊಮ್ಮನಹಳ್ಳಿ:  `ಡಾ.ಮಹಾಂತ ಸ್ವಾಮೀಜಿ ಸಮಾಜಮುಖಿ ಚಿಂತನೆಗಳ ಆಗರವಾಗಿದ್ದರು. ಅವರು ಹಾಕಿಕೊಟ್ಟ ಪರಂಪರೆ ಹಾಗೂ ಹಲವಾರು ಧಾರ್ಮಿಕ ಚಿಂತನೆಗಳು ಎಲ್ಲ ಸಮಾಜ ಬಾಂಧವರಿಗೆ ಆದರ್ಶಪ್ರಾಯವಾಗಿವೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.

ವೀರಶೈವ ಪಂಚಮಸಾಲಿ ಹರಿಹರ ಪೀಠದ ಜಗದ್ಗುರುಗಳ ಪೀಠಾರೋಹಣದ 5ನೇ ವಾರ್ಷಿಕೋತ್ಸವದ ಅಂಗವಾಗಿ ವೀರಶೈವ ಪಂಚಮಸಾಲಿ ಸಂಘದ ತಾಲ್ಲೂಕು ಘಟಕ ಇಲ್ಲಿಯ ಕೆಚ್ಚಿನಬಂಡಿ ರಸ್ತೆಯಲ್ಲಿರುವ ಹರ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಮಹಾಂತ ಸ್ವಾಮಿಗಳ ನುಡಿನಮನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

`ಪಂಚಮಸಾಲಿ ಸಮಾಜ ಬಾಂಧವರು ಒಗ್ಗಟ್ಟಿನಿಂದ ಮುನ್ನಡೆದಿದ್ದು, ಇತರ ಸಮಾಜದವರ ಪಾಲಿಗೆ ಮಾದರಿಯಾಗಿದೆ. ಬಜೆಟ್‌ನಲ್ಲಿ ರೂ.5 ಕೋಟಿ ಒದಗಿಸುವ ಮೂಲಕ ಹರಿಹರ ಪೀಠದ ಅಳಿಲು ಸೇವೆ ಮಾಡುವ ಸೌಭಾಗ್ಯ ನನ್ನದಾಗಿದೆ' ಎಂದು ಹರ್ಷ ವ್ಯಕ್ತಪಡಿಸಿದರು.

`12ನೇ ಶತಮಾನದ ವೀರಶೈವ ಚಳವಳಿ ಸ್ಮರಣೀಯವಾದದ್ದು. ಹಲವು ಶತಮಾನಗಳ ಇತಿಹಾಸವಿರುವಂತಹ ಚಳವಳಿಯ ಮೂಲಕ ರಾಜ್ಯದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ರಾಂತಿಗೆ ಶರಣರು ದಾರಿ ತೋರಿಸಿದರು. ವೀರೇಂದ್ರ ಪಾಟೀಲ್ ಹಾಗೂ ಜೆ.ಎಚ್.ಪಟೇಲರಂತಹ ಅನೇಕ ವೀರಶೈವ ಜನಪ್ರತಿನಿಧಿಗಳು ಸಮಾಜಕ್ಕೆ ಉತ್ತಮ ಮೌಲ್ಯಗಳನ್ನು ನೀಡಿ ಹೋಗಿದ್ದಾರೆ' ಎಂದು ಸ್ಮರಿಸಿಕೊಂಡರು.

ಸಂಘದ ಮಾಜಿ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಚರ ಪೀಠಾಧಿಪತಿ ಸಿದ್ಧಲಿಂಗ ಮಹಾಸ್ವಾಮಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ವೀರಶೈವ ಪಂಚಮಸಾಲಿ ಸಂಘದ ರಾಜ್ಯ ಘಟಕದಕ ಬಸವರಾಜ ದಿಂಡೂರು ಅಧ್ಯಕ್ಷತೆ ವಹಿಸಿದ್ದರು.

ಕೊಪ್ಪಳದ ಸಂಸದ ಶಿವರಾಮೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್, ಶಾಸಕರಾದ ನೇಮಿರಾಜ್ ನಾಯ್ಕ, ಹರಿಹರ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಸಂಘದ ಉಪಾಧ್ಯಕ್ಷ ಬಿ.ನಾಗನಗೌಡ, ಜಿಲ್ಲಾಧ್ಯಕ್ಷ ಬೊಪ್ಪಕಾನ್ ಕುಮಾರಸ್ವಾಮಿ, ತಾಲ್ಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಶಾರದಾ ಪ್ರಾರ್ಥಿಸಿದರು. ಚಿತ್ರದುರ್ಗದ ಉಪನ್ಯಾಸಕಿ ಟಿ.ಶೈಲಜಾ ಮತ್ತು ಬಾಚಿಗೊಂಡನಹಳ್ಳಿಯ ಶಿಕ್ಷಕಿ ಶೈಲಾ ಕಾರ್ಯಕ್ರಮ ನಿರೂಪಿಸಿದರು.

ಪಂಚಮಸಾಲಿ ಸಮಾಜದವರ ಬಹುಮುಖ್ಯ ಬೇಡಿಕೆ ಅಂದರೆ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ ಒದಗಿಸುವ ಕುರಿತಂತೆ ಮುಖ್ಯಮಂತ್ರಿಗಳು ಏನೂ ಭರವಸೆ ನೀಡದೇ ಸಮಾಜ ಬಾಂಧವರಲ್ಲಿ ನಿರಾಸೆ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.