ADVERTISEMENT

ಮಾದೂರಲ್ಲಿ ಕುಡಿಯುವ ನೀರಿಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಜುಲೈ 2013, 6:05 IST
Last Updated 23 ಜುಲೈ 2013, 6:05 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾದೂರು ಗ್ರಾಮದ ಜನತೆ ಕುಡಿಯುವ ನೀರಿಗಾಗಿ ತಳ್ಳುಬಂಡಿಗಳಲ್ಲಿ ಕೊಡಪಾನಗಳನ್ನಿಟ್ಟುಕೊಂಡು ಖಾಸಗಿ ಜಮೀನುಗಳತ್ತ ತೆರಳುತ್ತಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾದೂರು ಗ್ರಾಮದ ಜನತೆ ಕುಡಿಯುವ ನೀರಿಗಾಗಿ ತಳ್ಳುಬಂಡಿಗಳಲ್ಲಿ ಕೊಡಪಾನಗಳನ್ನಿಟ್ಟುಕೊಂಡು ಖಾಸಗಿ ಜಮೀನುಗಳತ್ತ ತೆರಳುತ್ತಿದ್ದಾರೆ.   

ಹಗರಿಬೊಮ್ಮನಹಳ್ಳಿ: “ಒಂದ ವರ್ಷಾತು ಊರಾಗ ನೀರ ಬರಾವಲ್ವು. ಬಂದ್ರೂ ಸಾಲಿ ಹತ್ರ ಇರೋ ಸಾಲ ನಲ್ಯಾಗ ಬರತಾವ್ರಿ. ಬಹಳಾ ಹೊತ್ತು ಇರೊಲ್ಲ. ನೀರ ಹಿಡೀಬೇಕೆಂದ್ರ ಊರ ಹೊರಗಿನ ಹೊಲಕ್ಕೆ ಹೊಗಬೇಕ್ರಿ. ಅದ್ರಾಗ ಕರೆಂಟ್ ಹೋಗೋದ್ರೊಳಗ ನೀರು ಹಿಡ್ಕಂಬಿಡಬೇಕು. ಒಂದೊಂದಾ ಕೊಡಾ ನೀರ ತರಬೇಕಂದ್ರ ತ್ರಾಸಾಕ್ಕೈತಿ ಅಂತಾ ಜನಾ ಮೂರ‌್ನಾಕ್ಸಾವ್ರ ಖರ್ಚು ಮಾಡಿ ತಳ್ಳುಬಂಡಿ ಮಾಡ್ಸ್ಯಾರ”. 

ತಾಲ್ಲೂಕಿನ ಮಾದೂರು ಗ್ರಾಮದ ಮೈಲಪ್ಪ ಗ್ರಾಮಸ್ಥರ ನೀರು ತರುವ ಬವಣೆಯನ್ನು ಪ್ರಜಾವಾಣಿ ಬಳಿ ಬಿಚ್ಚಿಟ್ಟಿದ್ದು ಹೀಗೆ.

ಹೌದು, ಬೆಣಕಲ್ಲು ಗ್ರಾ.ಪಂ. ವ್ಯಾಪ್ತಿಯ ಈ ಗ್ರಾಮದಲ್ಲಿ ಕುಡಿಯುವ ನೀರು ಸಂಗ್ರಹಿಸಲೆಂದು ಜನತೆ ತಳ್ಳುಬಂಡಿಗಳನ್ನು ಮಾಡಿಕೊಂಡಿದ್ದಾರೆ. ಇಂತಹ ಒಂದು ತಳ್ಳುಬಂಡಿ ಮೂಲಕ ಒಂದೇ ಬಾರಿಗೆ 8ಕೊಡ ನೀರು ತರುವ ಮೂಲಕ ತಮ್ಮ ಕುಡಿಯುವ ನೀರಿನ ಅಗತ್ಯ ಪೂರೈಸಿಕೊಳ್ಳುತ್ತಾರೆ.

ನಿಲುಗಡೆಯಾಗಿದ್ದ ವಿದ್ಯುತ್ ಬರುತ್ತಿ ದ್ದಂತೆ ಗ್ರಾಮದ ಜನರ ಮೈಯಲ್ಲಿ ವಿದ್ಯುತ್ ಸಂಚಾರವಾಗುತ್ತದೆ. ಗ್ರಾಮದ ಎಲ್ಲೆಡೆ ಕುಡಿಯುವ ನೀರು ಸಂಗ್ರಹಿಸುವ ಭಾಗವಾಗಿ ಮಕ್ಕಳು, ಯುವಕರು, ವಯೋವೃದ್ಧರು, ಮಹಿಳೆಯರು ಒಮ್ಮಮ್ಮೆ ಗರ್ಭಿಣಿಯರು ಕೂಡಾ ತಳ್ಳುಬಂಡಿಗಳಲ್ಲಿ ಊರ ಹೊರಗಿನ ಖಾಸಗಿ ಜಮೀನುಗಳ ಕೊಳವೆ ಬಾವಿಗಳ ಬಳಿ ತೆರಳಿ ನೀರು ತರುವ ಗಂಭೀರ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ.

500 ಮನೆಗಳಿರುವ ಈ ಗ್ರಾಮದಲ್ಲಿ 400ಕ್ಕೂ ಹೆಚ್ಚು ತಳ್ಳುಬಂಡಿಗಳಿವೆ. ತಳ್ಳುಬಂಡಿಗಳಿದ್ದವರಿಗೆ ಮಾತ್ರ ನೀರು ಇಲ್ಲದಿದ್ದರೆ ಕುಡಿಯುವ ನೀರಿಲ್ಲ ಎನ್ನು ವಂತಾಗಿದೆ. ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದಾಗಿ ಕಳೆದ ಒಂದು ವರ್ಷದಿಂದ ನೀರು ಸಂಗ್ರಹಿಸುವ ಗ್ರಾಮದ ಜನತೆಯ ಬವಣೆ ತಾರಕ ಕ್ಕೇರಿದೆ ಎಂದು ಗ್ರಾಮದ ಸೋಮಜ್ಜ ದೂರುತ್ತಾರೆ.

ಗ್ರಾಮದಲ್ಲಿ ಎರಡು ಕುಡಿಯುವ ನೀರಿನ ಸ್ಥಾವರಗಳಿವೆ. ಆದರೆ, ಸ್ಥಾವರ ದಲ್ಲಿ ನೀರು ಸಂಗ್ರಹಿಸಿ ನಲ್ಲಿಗಳ ಮೂಲಕ ಜನತೆಗೆ ನೀರು ವಿತರಿಸಬೇಕೆಂದರೆ ಸ್ಥಾವರಕ್ಕೆ ನೀರು ಸರಬರಾಜು ಮಾಡುವ ಜಲ ಮೂಲಗಳು ಬತ್ತಿವೆ.

ಈ ಹಿಂದೆ ಗ್ರಾಮಕ್ಕೆ ಸಮರ್ಪಕ ಕುಡಿ ಯುವ ನೀರು ಒದಗಿಸಲೆಂದು ಗ್ರಾ.ಪಂ. ಅಧಿಕಾರಿಗಳು ಇಲ್ಲಿಂದ 4 ಕಿ.ಮೀ. ದೂರದ ದಸಮಾಪುರ ಹಳ್ಳದಲ್ಲಿ ಕೊಳವೆ ಬಾವಿ ಕೊರೆಯಿಸಿ ಗ್ರಾಮ ದವರೆಗೆ ಪೈಪ್‌ಲೈನ್ ಮಾಡಿಸಿ ಮಾರ್ಗ ಮಧ್ಯದ ಪಿಲ್ಲೋಬನಹಳ್ಳಿ ಸಹಿತ ಮಾದೂರು ಗ್ರಾಮಕ್ಕೆ ನೀರು ಪೂರೈ ಸುತ್ತಿದ್ದರು. ಆದರೆ, ಮಳೆಗಾಲ ದಲ್ಲಾ ಗಿರುವ ಸ್ಥಿತ್ಯಂತರಗಳ ಕಾರಣಕ್ಕೆ ಕೊಳವೆ ಬಾವಿಯ ಅಂತರ್ಜಲ ಮಟ್ಟ ಕುಸಿದು ಗ್ರಾಮದ ಸ್ಥಾವರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಿ ಸಮಸ್ಯೆ ಬಿಗಡಾಯಿಸಿತು. ಜನತೆ ಹೊರವಲಯದಿಂದ ನೀರು ತರಲು ತಳ್ಳುಬಂಡಿಗಳ ಮೊರೆ ಹೋದರು.

ಗ್ರಾಮದ ಹಲವೆಡೆ ಮತ್ತೆ ಮತ್ತೆ ಕೊಳವೆ ಬಾವಿ ಕೊರೆಯಿಸಲಾದರೂ, ಕೊಳವೆಬಾವಿಗಳಲ್ಲಿನ ನೀರು ಗ್ರಾಮದ ಜನತೆಯ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸುವಷ್ಟಿಲ್ಲ. ಹಾಗಾಗಿ ಗ್ರಾಮದಲ್ಲಿ ಎರಡು ನೀರಿನ ಸ್ಥಾವರಗಳಿದ್ದರೂ ಜನತೆಯ ಪಾಲಿಗಿಲ್ಲ ಎನ್ನುವಂತಾಗಿದೆ.

ಬೇರೆ ಮೂಲಗಳಿಂದ ಗ್ರಾಮದ ಸ್ಥಾವರಗಳಿಗೆ ನೀರು ಒದಗಿಸುವ ಜೊತೆಗೆ ಗ್ರಾಮದೆಲ್ಲಡೆ ಜನತೆಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಅಗತ್ಯ ಪ್ರಮಾಣದಲ್ಲಿ ನಲ್ಲಿಗಳನ್ನು ಅಳವಡಿಸಿ ನೀರಿಗಾಗಿ ಹೊಲಗಳಿಗೆ ಅಲೆಯುವ ಜನತೆಯ ಬವಣೆ ನೀಗಿಸಬೇಕೆಂದು ಗ್ರಾಮದ ಬೀರಪ್ಪ, ಬಸವಣ್ಯಪ್ಪ, ಬೀರಜ್ಜ, ಸೋಮವ್ವ, ಲಕ್ಷಮ್ಮ , ಫಕೀರಪ್ಪ ಮತ್ತಿತರರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.