ADVERTISEMENT

ಮೆಕ್ಕೆಜೋಳ ಖರೀದಿ ಕೇಂದ್ರ: ಮಾಹಿತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 8:25 IST
Last Updated 10 ಜನವರಿ 2014, 8:25 IST

ಸಂಡೂರು: ಪಟ್ಟಣದಲ್ಲಿ ಪ್ರಾರಂಭಿಸಲಾಗಿರುವ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಮೆಕ್ಕೆಜೋಳ ಖರೀದಿ ನಡೆಯು­ತ್ತಿಲ್ಲವೆಂಬ ಮಾತು ಕೇಳಿ ಬರುತ್ತಿದೆ. ವಾಸ್ತವ ಸ್ಥಿತಿ ಏನಿದೆ ಎಂದು ಮಾಹಿತಿ ನೀಡುವಂತೆ ತಾ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಭಾನ್ ಸಾಬ್ ಪ್ರಶ್ನಿಸಿದರು.

ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ ನಡೆದ ತಾ.ಪಂ. ಮಾಸಿಕ ಕೆಡಿಪಿ ಸಭೆಯಲ್ಲಿ ಈ ಕುರಿತು ಕೃಷಿ ಅಧಿಕಾರಿಯನ್ನು ವಿಚಾ­ರಿಸಿದಾಗ, ಉತ್ತರಿಸಿದ ಕೃಷಿ ಅಧಿಕಾರಿ, ತಮ್ಮ ಇಲಾಖೆಯಿಂದ ಖರೀದಿ ಕೇಂದ್ರಕ್ಕೆ ಒಬ್ಬರನ್ನು ಗ್ರೇಡಿಂಗ್‌ಗಾಗಿ ನಿಯೋಜಿಸಲಾಗಿದೆ. ಖರೀದಿ ಕಾರ್ಯ­ವನ್ನು ಆಹಾರ ಸರಬರಾಜು ಇಲಾಖೆ­ಯವರು ಮಾಡಬೇಕೆಂದು ತಿಳಿಸಿ­ದರು. ಅಧಿಕಾರಿಯ ಉತ್ತರದಿಂದ ತೃಪ್ತರಾದಂತೆ ಕಾಣದ ಸ್ಥಾಯಿ ಸಮಿತಿ ಅಧ್ಯಕ್ಷರು, ಖರೀದಿ ಕೇಂದ್ರದ ಕುರಿತು ಕರಪತ್ರ ಹೊರಡಿಸಿ, ಜನರಲ್ಲಿ ಜಾಗೃತಿ ಮೂಡಿಸಲು ತಿಳಿಸಿದರು.

ನೀರನ್ನು ಮಿತವಾಗಿ ಬಳಸಬೇಕಿದೆ ಕೃಷಿ ಸಹಾಯಕ ನಿರ್ದೇಶಕ ಬಿ.ಸಿ. ರಡ್ಡೇರ್ ಮಾತನಾಡಿ, ಮುಂಗಾರಿನಲ್ಲಿ ಒಳ್ಳೆ ಬೆಳೆ ಬಂದಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ರಾತ್ರಿ ಮತ್ತು ಹಗಲಿನಲ್ಲಿ ಉಷ್ಣತೆಯ ಪ್ರಮಾಣದಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ಇದು ಬೇಸಿಗೆ ಮುಂಚಿತವಾಗಿಯೇ ನೀರಿನ ಸಮಸ್ಯೆ ಆರಂಭವಾಗುವ  ಸೂಚನೆಯಾಗಿದೆ. ಹಿಂಗಾರಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬರಲಾರದು.  ಜಲ ಕ್ಷಾಮ ತಲೆದೋರಬಹುದಾಗಿದೆ. ಆದ್ದರಿಂದ ಲಭ್ಯ ನೀರನ್ನು ಎಲ್ಲರೂ ಮಿತವಾಗಿ ಬಳಸಬೇಕಿದೆ ಎಂದು ತಿಳಿಸಿದರು.

ಅಧ್ಯಕ್ಷೆ ಭರಮಕ್ಕ ಮಾತನಾಡಿ, ಸಂಡೂರು–ತೋರಣಗಲ್ಲು ರಸ್ತೆ ನಿರ್ಮಾಣ ಕಾರ್ಯ ನಿಗದಿತ ಅವಧಿ­ಯಲ್ಲಿ ಪೂರ್ಣಗೊಳಿಸದ ಕಾರಣ, ಸಾರ್ವಜನಿಕರಿಗೆ ತುಂಬಾ ತೊಂದರೆ­ಯಾಗುತ್ತಿದೆ. ಶೀಘ್ರ ಪೂರ್ಣಗೊ­ಳಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇಒ ಸಣ್ಣವೀರಪ್ಪ ಮತ್ತು ಜಿಲ್ಲಾ ಪಂಚಾಯಿತಿ  ಇಂಜಿನಿಯರಿಂಗ್ ವಿಭಾ­ಗದ ಎಇಇ ಬಸವರಾಜ್ ಮಾತನಾಡಿ, ಬರ ಪರಿಹಾರ ಕಾಮಗಾರಿಗಳಿಗೆ ಒಟ್ಟು ₨ 8.74 ಕೋಟಿ ಕ್ರಿಯಾಯೋಜನೆ ರೂಪಿಸಿದ್ದು, ಅನುಮೋದನೆಗೆ ಕಳುಹಿಸಿದೆ ಎಂದು ತಿಳಿಸಿದರು.

ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಸೋಮ­ಶೇಖರ್, ಕಳೆದ ತಿಂಗಳು 21ರಿಂದ ಕುರಿಗಳಿಗೆ ಲಸಿಕೆಯನ್ನು ಹಾಕಲಾ­ಗುತ್ತಿದ್ದು, ಇದೇ  21ರ ವರೆಗೆ ನಡೆಯಲಿದೆ. ತಾಲ್ಲೂಕಿನ ತಮ್ಮ ಇಲಾಖೆಯಲ್ಲಿ ಶೇ. 80ರಷ್ಟು ಹುದ್ದೆಗಳು ಖಾಲಿ ಇವೆ. ಆದ್ದರಿಂದ ಕೆಎಂಎಫ್ ವೈದ್ಯರು  ಹೈನುಗಾರಿಕೆ ಮಾಡುವವರಿಗೆ ಸೇವೆಯನ್ನು ಒದಗಿಸಲು ವ್ಯವಸ್ಥೆ ಮಾಡಬೇಕು ಮತ್ತು ತಮ್ಮ ಇಲಾಖೆ ಅವರನ್ನು ಇಲಾಖೇತರ ಚಟುವಟಿಕೆಗಳಿಗೆ ನಿಯೋಜಿಸದಂತೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಪಂಗಡ ಉಪಯೋಜನೆಯಡಿಯಲ್ಲಿ ಮಹಿಳಾ ಸ್ವ–ಉದ್ಯೋಗಕ್ಕಾಗಿ ನೀಡಲಾಗುವ ಸಹಾಯ ಧನದ ಚೆಕ್ ಗಳನ್ನು ಕೆಲ ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯ ಪಿಡಿಒಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.