ADVERTISEMENT

ಮೆಟ್ರಿಯಲ್ಲಿ ಪ್ರಣವಜ್ಯೋತಿ ಮಹಾರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 10:40 IST
Last Updated 8 ಸೆಪ್ಟೆಂಬರ್ 2011, 10:40 IST

ಕಂಪ್ಲಿ: ಇಲ್ಲಿಗೆ ಸಮೀಪದ ಮೆಟ್ರಿ ಗ್ರಾಮದ ಪ್ರಣವಜ್ಯೋತಿ ಮಹಾ ರಥೋತ್ಸವ ಬುಧವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ಅಂಗವಾಗಿ ಶ್ರೀ ವಿಶ್ವಾರಾಧ್ಯ ಗುರುಕುಲ ಮಠದಲ್ಲಿ ಪಂಚಪೀಠಾಧೀಶ್ವರ ಶಿಲಾ ಮೂರ್ತಿ ಗಳಿಗೆ, ಉಜ್ಜಯಿನಿ ಸಿದ್ದಲಿಂಗೇಶ್ವರ ಮತ್ತು ಎಮ್ಮಿಗನೂರು ಜಡೆಸಿದ್ದೇಶ್ವರ, ಕ್ಷೇತ್ರದ ಸ್ಥಾಪಕರಾದ ಮಹಾದೇವ ತಾತ, ಗೌರಮ್ಮನವರ ಶಿಲಾಮೂರ್ತಿ ಗಳಿಗೆ ಭಕ್ತರೆಲ್ಲರೂ ಸೇರಿ ಮಹಾ ರುದ್ರಾಭಿಷೇಕ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಗಂಗೆಸ್ಥಳ, ಪೂರ್ಣಕುಂಭ, ಪಂಚಾಪೀಠಾಧೀಶ್ವರರ ಉತ್ಸವ ಮೂರ್ತಿಗಳ ಅಡ್ಡಪಲ್ಲಕ್ಕಿ, ಪ್ರಣವೋತ್ಸವ, ಗೋವೋತ್ಸವ, ಭಸ್ಮೋತ್ಸವ, ಗೀತೋತ್ಸವ ಕಾರ್ಯಕ್ರಮಗಳು ನಡೆದವು. ಈ ಎಲ್ಲ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಿವಾಚಾರ್ಯರು, ಮಹಾಸ್ವಾಮಿಗಳು ಭಾಗವಹಿಸಿ ಆಶೀರ್ವಚನ ನೀಡಿದರು.

ಸಂಜೆ ಪ್ರಣವಜ್ಯೋತಿ ಮಹಾ ರಥೋತ್ಸವ ಶ್ರೀಮಠದಿಂದ ಆರಂಭ ಗೊಂಡು ಗ್ರಾಮದ ಮುಖ್ಯರಸ್ತೆ ಮೂಲಕ ಎದುರು ಬಸವಣ್ಣನವರಗೆ ತಲುಪಿ ಪುನಃ ಮಠಕ್ಕೆ ಬಂದು ತಲುಪಿತು.

ಬಳ್ಳಾರಿ, ಕೊಪ್ಪಳ, ರಾಯಚೂರು ಇನ್ನು ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ತೇರಿಗೆ ಹೂವು, ಹಣ್ಣು ಎಸೆದು ಮನದ ಹರಕೆ ತೀರಿಸಿದರು. ಇನ್ನು ಕೆಲ ಭಕ್ತರು ತೇರನ್ನು ಎಳೆದು ತಮ್ಮ ಭಕ್ತಿಸೇವೆ ಸಮರ್ಪಿಸಿದರು. ರಥೋತ್ಸವದಲ್ಲಿ ವಿವಿಧ ವಾದ್ಯ ತಂಡಗಳು ಪಾಲ್ಗೊಂಡಿದ್ದವು.

 ಕಳೆದ 40ದಿನಗಳಿಂದ ಶ್ರೀಮಠದಲ್ಲಿ ನಡೆಯುತ್ತಿದ್ದ `ಕಲ್ಬುರ್ಗಿ ಶರಣ ಬಸವೇಶ್ವರ ಪುರಾಣ~ ಬುಧವಾರ ಮಹಾ ಮಂಗಲಗೊಂಡಿತು. ಬಸವ ಪ್ರಿಯ ಶಿವಾನಂದಶಾಸ್ತ್ರಿಗಳು ಪುರಾಣ ಪ್ರವಚನ ನೆರವೇರಿಸಿದರು. ಬಸವ ನಂದಪ್ಪ ಸಾದು ಹಾರ್ಮೋನಿಯಂ, ಸಿ.ಡಿ. ದುರ್ಗಾದಾಸ್ ತಬಲಸಾಥ್ ನೀಡಿದರು.

ಮಹಾರಥೋತ್ಸವ ಯಶಸ್ವಿ ಸಂಕೇತವಾಗಿ ಬಾಣ ಬಿರುಸು ನಡೆಯಿತು. ಶ್ರೀ ಗೌರಸಮುದ್ರ ಮಾರೆಮ್ಮದೇವಿ ಕರ್ನಾಟಕ ನಾಟಕ ಮಂಡಳಿ, ವಾಲ್ಮೀಕಿ ಸಂಘ ಆಶ್ರಯದಲ್ಲಿ ರಾತ್ರಿ `ವೀರಭಿಮನ್ಯು ಕಾಳಗ ಅರ್ಥಾತ್ ಸೈಂಧವನ ವಧೆ~ ಬಯಲಾಟ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.