ADVERTISEMENT

ಮೇ 15ರೊಳಗೆ ನೆರೆ ಸಂತ್ರಸ್ತರಿಗೆ ಮನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2011, 6:35 IST
Last Updated 16 ಏಪ್ರಿಲ್ 2011, 6:35 IST

ಸಿರುಗುಪ್ಪ: ‘ತಾಲ್ಲೂಕಿನ 16 ಗ್ರಾಮಗಳಲ್ಲಿ ನೆರೆ ಸಂತ್ರಸ್ತರಿಗಾಗಿ ನಿರ್ಮಾಣಗೊಂಡಿರುವ ಮನೆಗಳನ್ನು ಮೇ 15ರ ಒಳಗೆ ವಿತರಿಸಲು ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಗಣಿ ಮಾಲೀಕರ ಜೊತೆ ಚರ್ಚಿಸಿ ನಿರ್ಧರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತರಿಗೆ ನಿರ್ಮಿಸಿದ ಮನೆಗಳು ಉತ್ತಮ ಗುಣಮಟ್ಟದಿಂದ ಕೂಡಿವೆ.ಮನೆಗಳ ಹಂಚಿಕೆಯನ್ನು ಲಾಟರಿ ಮೂಲಕ ಸಂತ್ರಸ್ತರಿಗೆ ವಿತರಿಸಲಾಗುವುದು ಎಂದು ತಿಳಿಸಿದರು. ಆ ಗ್ರಾಮಗಳಿಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದೆಂದರು.

ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಈ ಹಿಂದೆ ಆರ್ಹರಲ್ಲದ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅಂತಹ ವ್ಯಕ್ತಿಗಳನ್ನು ಆ ಸ್ಥಳದಿಂದ ಖಾಲಿ ಮಾಡಿಸುವಂತೆ ಇತ್ತೀಚೆಗೆ ಪುರಸಭೆಯ ಅಧಿಕಾರಿಗಳು ಅದೇಶ ಹೊರಡಿಸಿದ ಕುರಿತು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದಾಗ,  ‘ಪುರಸಭೆಯ ಆದೇಶವನ್ನು ತಡೆಹಿಡಿದು ಪ್ರಸಕ್ತ ಇರುವ ನಿವಾಸಿಗಳ ಬಗ್ಗೆ ವಿಚಾರಣೆ ನಡೆಸಿ ಆರ್ಹ ಫಲಾನುಭವಿಗಳು ಇದ್ದಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ’ ಎಂದು ಭರವಸೆ ನೀಡಿದರು.

ಪಟ್ಟಣದ ಪ್ರತಿಯೊಂದು ವಾರ್ಡ್‌ಗಳಿಗೂ ಒಂದು ಉದ್ಯಾ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಉತ್ತಮ ವಾತಾವರಣ ನಿರ್ಮಿಸುವಂತೆ ಜಿಲ್ಲಾಧಿಕಾರಿ ಬಿಸ್ವಾಸ್ ಅಧಿಕಾರಿಗಳಿಗೆ ಸಲಹೆ ನೀಡಿದರು. ಪಟ್ಟಣದ ಅಭಿವೃದ್ಧಿಗಾಗಿ ಬಿಡುಗಡೆಯಾದ ಕೋಟ್ಯಂತರ ರೂಪಾಯಿ ಹಣವನ್ನು ಕೇವಲ ಮುಖ್ಯ ರಸ್ತೆಯ ಅಭಿವೃದ್ಧಿಗೆ ವೆಚ್ಚ ಮಾಡದೇ,  ಅಭಿವೃದ್ಧಿ ಅನುದಾನದ ಹಣವನ್ನು ಪಟ್ಟಣದ ಎಲ್ಲಾ ಬಡಾವಣೆ ಮತ್ತು ಕೊಳಗೇರಿ ಪ್ರದೇಶಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಗೆ ಬಳಸಿಕೊಂಡು ಸ್ವಚ್ಛ ಮತ್ತು ಉತ್ತಮ ಪರಿಸರವುಳ್ಳ ಪಟ್ಟಣವಾಗಿಸಲು ಯೋಜನೆಗಳನ್ನು ರೂಪಿಸಿ ಎಂದರು.

ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಅಕಾಲಿಕ ಮಳೆಗೆ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಭತ್ತ ನಷ್ಟವಾಗಿದ್ದು, ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅರ್ಹರಿಗೆ ಶೀಘ್ರವೇ ಪರಿಹಾರ ನೀಡಲು ತಹಸೀಲ್ದಾರ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.