ಮರಿಯಮ್ಮನಹಳ್ಳಿ: ನಾಟಕಕ್ಕೆ ತನ್ನದೇ ಆದ ಇತಿಹಾಸ ಪರಂಪರೆ ಇದ್ದು, ಜೀವಂತ ಕಲೆಯಾದ ರಂಗಭೂಮಿ ಕಲೆ ಎಂದೂ ನಶಿಸುವದಿಲ್ಲ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ದುರ್ಗಾದಾಸ್ ರಂಗಮಂದಿರದಲ್ಲಿ ಬುಧವಾರ ಸಂಜೆ ಪಟ್ಟಣದ ಮಹಿಳಾ ವೃತ್ತಿ ರಂಗ ಕಲಾವಿದರ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೊಗದಲ್ಲಿ ಹಮ್ಮಿಕೊಂಡ 3ದಿನಗಳ ಮಹಿಳಾ ಪೌರಾಣಿಕ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ನಾಟಕ ಪರಂಪರೆಯು ಆಧುನಿಕತೆಯನ್ನು ತನ್ನ ಜತೆ ಜತೆಗೆ ತೆಗೆದುಕೊಂಡು ಹೋಗುತ್ತಿರುವುದು ಸ್ವಾಗತಾರ್ಹ ಎಂದರು.
ಟಿವಿ ಮಾಧ್ಯಮದೆದುರು ರಂಗಭೂಮಿಯು ತನ್ನ ಅಸ್ತಿತ್ವ ಉಳಿಸಿಕೊಳ್ಳವ ಕಷ್ಟಕಾಲ ಎದುರಾಗಿದ್ದು, ಈಗ ಆ ಪರಿಸ್ಥಿತಿ ತಿಳಿಯಾಗಿದೆ ಎಂದರು. ಹಿರಿಯ ಕಲಾವಿದರಿಗೆ ಮಾಸಾಶನ ನೀಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು. ರಂಗಭೂಮಿಗೆ ಮರಿಯಮ್ಮನಹಳ್ಳಿಯ ಕೊಡುಗೆ ದೊಡ್ಡದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ನೇಮಿರಾಜ್ ನಾಯ್ಕ, ರಂಗಭೂಮಿಗೆ ಬಳ್ಳಾರಿ ಜಿಲ್ಲೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇದರಲ್ಲಿ ಮರಿಯಮ್ಮನಹಳ್ಳಿಯು ರಂಗ ಪರಂಪರೆ ಮುಖ್ಯವಾಗಿದೆ. ಇಂದಿನ ಆಧುನಿಕ ದಿನಮಾನಗಳಲ್ಲಿ ರಂಗಭೂಮಿಯನ್ನು ಉಳಿಸಿಕೊಂಡು ಬೆಳಸಿಕೊಂಡು ಹೊಗಬೇಕಾಗಿದೆ. ರಂಗಭೂಮಿ ಕಲೆ ಬೆಳಸುವ ನಿಟ್ಟಿನಲ್ಲಿ ಕಲೆ, ಕಲಾವಿದರಿಗೆ ಗೌರವ ನೀಡುವದರ ಜತೆಗೆ ಪ್ರೊತ್ಸಾಹ ನೀಡಬೇಕಿದೆ ಎಂದರು.
ರಂಗಕರ್ಮಿ ಹಾಗೂ ಪತ್ರಕರ್ತ ಗುಡಿಹಳ್ಳಿ ನಾಗರಾಜ, ನಾಟಕ ಅಕಾಡೆಮಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಕಡಕೊಳ, ರಾಜಣ್ಣ ಜೇವರ್ಗಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿ.ಎಸ್.ಮಂಜುಳಬಾಯಿ ಮಾತನಾಡಿದರು. ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆರ್ಶೀವಚನ ನೀಡಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಅನಿತಾ ಆನಂದ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸಿ.ಡಿ.ಮಹದೇವ್, ಉಪಾಧ್ಯಕ್ಷೆ ಬಾಣದ ಸೀತಮ್ಮ, ಸದಸ್ಯ ಎಚ್.ಲಕ್ಷ್ಮಣ್, ಮುಖಂಡ ಕೊಟ್ಗಿ ನಾಗಪ್ಪ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಾಡೋಜ ಪ್ರಶಸ್ತಿ ಪುರಸ್ಕೃತೆ ಸುಭದ್ರಮ್ಮ ಮನ್ಸೂರ್, ರಾಜಣ್ಣ ಜೇವರ್ಗಿ, ಶಾಸಕ ಕೆ.ನೇಮಿರಾಜ್ ನಾಯ್ಕ, ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್, ಕೊಟ್ಗಿ ನಾಗಪ್ಪ ಅವರನ್ನು ಸನ್ಮಾನಿಸಲಾಯಿತು.
ಸುಪ್ರಿಯಾ ಪ್ರಾರ್ಥಿಸಿದರು. ಮಹಿಳಾ ವೃತ್ತಿ ರಂಗ ಕಲಾವಿದರ ಸಂಘದ ಅಧ್ಯಕ್ಷೆ ಕೆ.ನಾಗರತ್ನಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮೇಶ್ ಉಪ್ಪಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ವೀಣಾ ಆದವಾನಿ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಬಳ್ಳಾರಿಯ ಶರಣರ ಬಳಗದ ಕಲಾವಿದೆಯರು ಸುಭದ್ರಮ್ಮ ಮನ್ಸೂರ್ ನಿರ್ದೇಶನದಲ್ಲಿ `ಹೇಮರೆಡ್ಡಿ ಮಲ್ಲಮ್ಮ~ ನಾಟಕವನ್ನು ಪ್ರದರ್ಶಿಸಿದರು. ಕಲಾವಿದೆಯರಾದ ವರಲಕ್ಷ್ಮಿ ಬಳ್ಳಾರಿ, ಭಾರತಿ ಶಿರಹಟ್ಟಿ, ನಂದಾ ಬಾಗಲಕೋಟಿ, ಉಮರಾಣಿ ಇಳಕಲ್, ವೀಣಾ ಆದವಾನಿ, ಮರಿಯಮ್ಮನಹಳ್ಳಿ ನಾಗರತ್ನಮ್ಮ ಅಭಿನಯಿಸಿದರು. ತೋಟಯ್ಯಸ್ವಾಮಿ ಹಾರ‌್ಮೋನಿಯಂ ಹಾಗೂ ವಿರೂಪಾಕ್ಷ ಮೊರಗೇರಿ ತಬಲ ಸಾಥ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.