ADVERTISEMENT

ರಸ್ತೆ ದಾಟಲು ನಿತ್ಯ ಸಾಹಸ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 3:40 IST
Last Updated 17 ನವೆಂಬರ್ 2012, 3:40 IST
ರಸ್ತೆ ದಾಟಲು ನಿತ್ಯ ಸಾಹಸ
ರಸ್ತೆ ದಾಟಲು ನಿತ್ಯ ಸಾಹಸ   

ಸಂಡೂರು: ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಸರಿ ಇಲ್ಲದ ಕಾರಣ ಸಾರ್ವಜನಿಕರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಸಾರಿಗೆ ಘಟಕದಿಂದ ಬಸ್‌ಗಳ ಲಭ್ಯವಿದ್ದರೂ ಹದಗೆಟ್ಟ ರಸ್ತೆಗಳ ನೆಪ ಒಡ್ಡಿ ಅಧಿಕಾರಿಗಳು ಸರಿ ಇರುವ ಬೇರೆ ತಾಲ್ಲೂಕುಗಳ ಸಂಚಾರಕ್ಕೆ ಸರ್ಕಾರಿ ವಾಹನಗಳನ್ನು ಬಳಕೆ ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ದೇವಗಿರಿ, ಎಂ. ಲಕ್ಕಲಹಳ್ಳಿ, ನಾಗೇನಹಳ್ಳಿ, ಉಬ್ಬಲಗಂಡಿ,ರಾಜಾಪುರ, ಸೋವೇನಹಳ್ಳಿ (ಕೆರೆ ರಸ್ತೆ), ನಂದಿಹಳ್ಳಿ ಸೇರಿದಂತೆ ಬಹುತೇಕ ಹಳ್ಳಿಗಳ ರಸ್ತೆಗಳು ತಗ್ಗು, ಗುಂಡಿಗಳಿಂದ ಕೂಡಿದ್ದು ದೊಡ್ಡವಾಹನಗಳು ಸಂಚರಿಸದ ಸ್ಥಿತಿ ತಲುಪಿವೆ. ಜನರು ತಮ್ಮ ದಿನನಿತ್ಯದ ಅಗತ್ಯತೆಗಳಿಗಾಗಿ ಮೋಟಾರ್ ಸೈಕಲ್, ಖಾಸಗಿ ವಾಹನಗಳ ಮೊರೆ ಹೋಗುತ್ತಿರುವುದು ಅನಿವಾರ್ಯವಾಗಿದೆ.

ಪಟ್ಟಣದಿಂದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರಕ್ಕೆ ತೆರಳಲು ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಪ್ರತಿನಿತ್ಯ ಹರಸಾಹಸ ಮಾಡುತ್ತಿದ್ದಾರೆ. `ಅರ್ಧತಾಸಿನ ಹಾದಿಗೆ ಎರಡು ಗಂಟಿ ಬೇಕನೋಡ್ರಿ ಅದೂ ಬಸ್ ಬಂದ್ರ~ ಎನ್ನತ್ತಾರೆ ದೇವಗಿರಿಯ ರಾಘವೇಂದ್ರ. `ಮಳೆ ಬಂದರೆ ಈ ರಸ್ತೆಯಲ್ಲಿ ನಡೆದಾಡಲು ಆಗುವುದಿಲ್ಲ ಜನರು ರಸ್ತೆ ರಿಪೇರಿ ಮಾಡ್ಸರ‌್ರೀ  ಎಂದರೆ ಮಣ್ಣು ಹಾಕಿ ಕಾಮಗಾರಿಯ ಬಿಲ್ ಕಮಾಯಿಸಿತ್ತಾರೆ. ಇದು ಇಲ್ಲಿನ ಡೆವಲಪ್‌ಮೆಂಟ್~ ಎನ್ನುವುದು ಸ್ಥಳೀಯರ ಆರೋಪ.

`ಸಂಡೂರು- ಹೊಸಪೇಟೆ ರಸ್ತೆ ಮತ್ತು ಬಂಡ್ರಿ- ಕೂಡ್ಲಿಗಿ, ಚೋರನೂರು-ಬಂಡ್ರಿ, ಚೋರನೂರು- ಸೋವೇನಹಳ್ಳಿ  ರಸ್ತೆಗಳನ್ನು ಬಿಟ್ಟರೆ ಉಳಿದ ರಸ್ತೆಗಳಲ್ಲಿ ಸಂಚಾರಕ್ಕೆ ಯೋಗ್ಯವಿಲ್ಲ. ಉತ್ತಮ ರಸ್ತೆಗಳು ನಿರ್ಮಾಣವಾಗಬೇಕಿದೆ ಎನ್ನುವುದು ಸಾರಿಗೆ ಇಲಾಖೆ ಸಿಬ್ಬಂದಿಯೊಬ್ಬರ ಅನಿಸಿಕೆ.

ಗ್ರಾಮದಿಂದ ಪಟ್ಟಣಗಳ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಅವ್ಯವಸ್ಥೆಯ ಸಂಚಾರಕ್ಕೆ ಬೇಸತ್ತು ಶಾಲೆ ಬಿಟ್ಟ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಅಂಶವನ್ನು  ಶಿಕ್ಷಣ ಇಲಾಖೆ ಗುರುತಿಸಿದೆ. 

ತೋರಣಗಲ್- ಕೂಡ್ಲಿಗಿ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದರೂ ಜಿಂದಾಲ್‌ಗೆ ಅದಿರು ಸಾಗಿಸುವ ಲಾರಿಗಳ ಕಿರಿಕಿರಿಯಿಂದಾಗಿ ಕ್ಯೂರಿಂಗ್ ಕೆಲಸಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದರೂ ಕೂಡ ತಾಲ್ಲೂಕು ಆಡಳಿತ ಕೈಕಟ್ಟಿ ಕುಳಿತಿದೆ.

ಶಾಸಕರು, ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಕೆಟ್ಟ ರಸ್ತೆಗಳನ್ನು ಬೇಗ ಸರಿಪಡಿಸಿ ಹಳ್ಳಿಗರ ಸುಗಮ ಸಂಚಾರಕ್ಕೆ ಅನುಕೂಲವಾಗುವ ಕೆಲಸಗಳು ಜಿಲ್ಲಾಡಳಿತದಿಂದ ಆಗಲಿ ಎನ್ನತ್ತಾರೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಗುಡೇಕೋಟೆ ನಾಗರಾಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.