ಹೊಸಪೇಟೆ: ನಗರದ ಮೇನ್‌ಬಜಾರ್ ರಸ್ತೆ ವಿಸ್ತರಣೆಗಾಗಿ ಕಾಲಾವಕಾಶ ನೀಡಿದ್ದರೂ ಕ್ರಮತೆಗೆದುಕೊಳ್ಳದ ಅಂಗಡಿಗಳನ್ನು ನಗರಸಭೆ ವತಿಯಿಂದ ಶನಿವಾರ ನೆಲಸಮ ಮಾಡಲಾಯಿತು.
ಕೆಲ ಅಂಗಡಿಗಳ ಕಟ್ಟಡಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ತೆರವು ಮಾಡಲಾಯಿತು. ಮೇನ್‌ಬಜಾರ್ ರಸ್ತೆಯನ್ನು ವಿಸ್ತರಿಸಲು ಕೆಲ ತಿಂಗಳ ಹಿಂದೆ ಒಮ್ಮತದಿಂದ ನಿರ್ಧರಿಸಲಾಗಿತ್ತು. ಅದೇ ರೀತಿಯಾಗಿ ಆ ಭಾಗದ ಶೇ. 90ರಷ್ಟು ವ್ಯಾಪಾರಸ್ಥರು ಕಟ್ಟಡಗಳನ್ನು ಸ್ವ-ಪ್ರೇರಣೆಯಿಂದ ತೆರವುಮಾಡಿದ್ದರು. ಆದರೆ ಕೆಲವು ಅಂಗಡಿಗಳ ಮಾಲೀಕರು ತೆರವುಮಾಡದ ಹಿನ್ನೆಲೆಯಲ್ಲಿ ಕಾಮಗಾರಿಯಲ್ಲಿ ವಿಳಂಬವಾಗಿತ್ತು.
ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಮುಖ್ಯರಸ್ತೆಯಲ್ಲಿ ಎಲ್ಲಾ ಕಾಮಗಾರಿಗಳನ್ನು ಕೈಗೊಂಡಿರುವ ನಗರಸಭೆ ಅಧಿಕಾರಿಗಳು, ಅಂತಿಮವಾಗಿ ಶನಿವಾರ ಬೆಳಿಗ್ಗೆ ಜೆಸಿಬಿ ಯಂತ್ರಗಳ ಸಹಾಯದಿಂದ ಕಟ್ಟಡಗಳನ್ನು ತೆರವುಗೊಳಿಸಲಾರಂಭಿಸಿದರು. ನಗರಸಭೆ ಪೌರಾಯುಕ್ತ ಕೆ. ರಂಗಸ್ವಾಮಿ, ಎಂಜಿನಿಯರ್ ಮನ್ಸೂರ್ ಅಹಮ್ಮದ್ ಸೇರಿದಂತೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಕೆಲ ಅಂಗಡಿಗಳ ಮಾಲೀಕರು ಆಕ್ಷೇಪ ವ್ಯಕ್ತಪಡಿಸಬಹುದು ಎಂಬ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.