ADVERTISEMENT

ರೈತರಿಂದ ಗೆಸ್ಕಾಂ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 6:25 IST
Last Updated 8 ಜೂನ್ 2011, 6:25 IST
ರೈತರಿಂದ ಗೆಸ್ಕಾಂ ಕಚೇರಿಗೆ ಮುತ್ತಿಗೆ
ರೈತರಿಂದ ಗೆಸ್ಕಾಂ ಕಚೇರಿಗೆ ಮುತ್ತಿಗೆ   

ಹಗರಿಬೊಮ್ಮನಹಳ್ಳಿ: ಕಳೆದ 8 ದಿನಗಳಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ತಾಲ್ಲೂಕಿನ ಕೇಶವರಾಯನಬಂಡಿ ಗ್ರಾಮದ ರೈತರು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ನೇತೃತ್ವದಲ್ಲಿ ಸೋಮವಾರ ಗೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

 ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಬುಡ್ಡಿ ಬಸವರಾಜ್, ಕೇಶವರಾಯನಬಂಡಿ ಗ್ರಾಮದಿಂದ ಕೂಗಳತೆ ದೂರದಲ್ಲಿರುವ ಉಪ್ಪಿನಾಯಕನಹಳ್ಳಿ ಗ್ರಾಮದ ಬಳಿ ಇರುವ ಉಪ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡಬೇಕಾಗಿರುವ ಗೆಸ್ಕಾಂ ಇಲಾಖೆಯ ಅಧಿಕಾರಿಗಳು ಗ್ರಾಮದಿಂದ ಬಹು ದೂರದಲ್ಲಿರುವ ತಾಲ್ಲೂಕಿನ ಬ್ಯಾಲಾಳು ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ಸಮಸ್ಯೆ ಉದ್ಭವಿಸಿದೆ ಎಂದು ದೂರಿದರು.

   ಗ್ರಾಮದ ಬಳಿ ಇರುವ ಖಾಸಗಿ ಕಾರ್ಖಾನೆ ಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಗೆಸ್ಕಾಂ ಅಧಿಕಾರಿಗಳು ಅವರಿಗೆ ಉಪ್ಪಿನಾಯಕನಹಳ್ಳಿ ಕೇಂದ್ರದಿಂದ ಸಮರ್ಪಕ ವಿದ್ಯುತ್ ನೀಡಿ ರೈತರಿಗೆ ವಿದ್ಯುತ್ ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಇದೇ ವೇಳೆ ಅಧಿಕಾರಿಗಳು ಮತ್ತು ರೈತರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೆಲವು ರೈತರು ಕಚೇರಿಯ ಶಟರ್ ಎಳೆದು ಪ್ರತಿಭಟಿಸಿದರು. ವಿಷಯ ತಿಳಿಯುತ್ತಿದ್ದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ಸ್ಥಳಕ್ಕೆ ಧಾವಿಸಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಲ್ಲದೆ ದೂರವಾಣಿಯ ಮೂಲಕ ಹೊಸಪೇಟೆಯ ಗೆಸ್ಕಾಂ ಇಇ ಲೀಲ್ಯಾನಾಯ್ಕ ಅವರನ್ನು ತರಾಟೆಗೆ ತೆಗೆದುಕೊಂಡರು.

 ಖಾಸಗಿ ಕಾರ್ಖಾನೆಯವರಿಗೆ ವಿದ್ಯುತ್ ನೀಡಲು ಬರುತ್ತೆ. ರೈತರಿಗೆ ವಿದ್ಯುತ್ ನೀಡಲು ನಿಮಗೇನು ಧಾಡಿಯಾಗಿದೆ ಎಂದು ಕಿಡಿ ಕಾರಿದರು.

 ಶೀಘ್ರ ಕಾಮಗಾರಿ ಪೂರೈಸಿ ಒಂದು ವಾರದೊಳಗೆ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ವಿತರಿಸುತ್ತೇವೆ ಎಂದು ಅಧಿಕಾರಿಗಳು ಮೌಖಿಕ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ರೈತರು ಹಿಂಪಡೆದರು.

 ಜಿ.ಪಂ. ಮಾಜಿ ಅಧ್ಯಕ್ಷ ಎಚ್. ಭೀಮಪ್ಪ, ಪಿ. ಗಣೇಶ್, ಎಂ. ಈಶಪ್ಪ, ಎಸ್.ಬಿ. ಹನಮಂತಪ್ಪ, ಎಚ್. ಹನಮಂತಪ್ಪ, ಕೆ. ಕೊಟ್ರೇಶಪ್ಪ ಹಾಗೂ ಎಚ್. ಶಂಕ್ರಪ್ಪ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.