ADVERTISEMENT

ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 4:34 IST
Last Updated 17 ಸೆಪ್ಟೆಂಬರ್ 2013, 4:34 IST

ಬಳ್ಳಾರಿ: ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಎ.ಜೆ. ಸದಾಶಿವ ಆಯೋಗ ಸಲ್ಲಿಸಿರುವ ವರದಿಯನ್ನು ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾ ರಸು ಮಾಡಬೇಕು ಎಂದು ಆಗ್ರಹಿಸಿ  ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ತಾಲ್ಲೂಕು ಘಟಕದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಆಯೋಗದ ಮುಖ್ಯಸ್ಥ ನ್ಯಾ.ಎ.ಜೆ. ಸದಾಶಿವ ಸೂಕ್ತ ಸಮೀಕ್ಷೆ ನಡೆಸಿ ಕಳೆದ ವರ್ಷ  ವರದಿ ಸಲ್ಲಿಸಿದ್ದು, ರಾಜ್ಯ ಸರ್ಕಾರ ವರದಿಯ ಅನುಷ್ಠಾನಕ್ಕೆ ಮುಂದಾಗದಿರಲು  ಕಾರಣಗಳು ಅರ್ಥವಾಗುತ್ತಿಲ್ಲ ಎಂದು ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ವೀರೇಶ್ ತಿಳಿಸಿದರು.

ಪರಿಶಿಷ್ಟ ಜಾತಿಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ, ಛಲವಾದಿ ಜನಾಂಗವನ್ನು ಕಡೆಗಣಿಸುವ ಮೂಲಕ ತಾಳ್ಮೆ ಕೆಣಕಲಾಗುತ್ತಿದೆ.  ಜನಾಂಗದ ಜನತೆ ಸರ್ಕಾರದ ವಿರುದ್ಧ ರೊಚ್ಚಿಗೇಳುವ ಮುನ್ನ ಒಳಮೀಸಲಾತಿ ವರ್ಗೀಕರಣಕ್ಕೆ ಮುಂದಾಗಬೇಕು ಎಂದು ಅವರು ಕೋರಿದರು.

ಅಲ್ಲದೆ, ರಾಜ್ಯದಲ್ಲಿ ಸೇವೆ ಸಲ್ಲಿಸು ತ್ತಿರುವ ಗ್ರಾಮ ಸಹಾಯಕರನ್ನು ‘ಡಿ’ ಗ್ರೂಪ್ ನೌಕರರೆಂದು ಪರಿಗಣಿಸಬೇಕು. ಆರೋಗ್ಯ ಕವಚ 108 ನೌಕರರ ನಿರ್ವಹಣೆಯನ್ನು ಸರ್ಕಾರವೇ ವಹಿಸಕೊಳ್ಳಬೇಕು. ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದು ಗೊಳಿಸಿ, ಸೇವೆ ಕಾಯಂ ಮಾಡಬೇಕು. ಸಫಾಯಿ ಕರ್ಮಚಾರಿ ಅರೆಕಾಲಿಕ ನೌಕರರ ಸೇವೆ ಕಾಯಂ ಮಾಡಬೇಕು. ಚರ್ಮ ಕುಶಲಕರ್ಮಿಗಳಿಗೆ ವಿಶೇಷ ಸಾಲ ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ ಸಮಿತಿ ನೂರಾರು ಸದಸ್ಯರು ತಹಶಿೀಲ್ದಾರ್‌ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಗಿರಿಮಲ್ಲಪ್ಪ, ಉಪಾಧ್ಯಕ್ಷ ಬೆಳಗಲ್ಲು ಹುಲುಗಪ್ಪ, ಪ್ರಧಾನ ಕಾರ್ಯದರ್ಶಿ ಜಗನ್ನಾಥ, ಸಂಘಟನಾ ಕಾರ್ಯದರ್ಶಿ  ವೀರಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ಕುಮಾರಸ್ವಾಮಿ, ಸಣ್ಣ ವಂಡ್ರಿ, ನಗರ ಘಟಕದ ಅಧ್ಯಕ್ಷ ಪ್ರಸಾದ್, ನಾಗರಾಜ, ಮಸ್ತಾನ್, ಚಿನ್ನ ರಾಯುಡು, ಹಲಕುಂದಿ ರಮೇಶ, ಲಕ್ಷ್ಮಣ, ಬಂಗಾರಪ್ಪ, ಮಣಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.