ADVERTISEMENT

ವಿಶ್ರಾಂತ ಕುಲಸಚಿವರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 7:20 IST
Last Updated 10 ಮಾರ್ಚ್ 2018, 7:20 IST
ವಿಶ್ರಾಂತ ಕುಲಸಚಿವರಿಂದ ಧರಣಿ
ವಿಶ್ರಾಂತ ಕುಲಸಚಿವರಿಂದ ಧರಣಿ   

ಹೊಸಪೇಟೆ: ‘ಕೃತಿ ಚೌರ್ಯ ಮಾಡಿರುವ ತುಮಕೂರಿನ ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಚಿಕ್ಕಣ್ಣ ಯಣ್ಣೆಕಟ್ಟೆ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ವಿಶ್ರಾಂತ ಕುಲಸಚಿವ ಎಸ್‌.ಎಸ್‌.ಪೂಜಾರ ಅವರು ಶುಕ್ರವಾರ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹೊರಭಾಗದ ರಸ್ತೆಬದಿ ಏಕಾಂಗಿಯಾಗಿ ಧರಣಿ ನಡೆಸಿದರು.

‘ನಾನು ರಚಿಸಿರುವ ‘ಹಾಲುಮತ ಹರಕೆಯ ಹಾಡು’ ಪದ್ಯವು 1978ರಲ್ಲಿ ‘ಕಾಲಗತಿ’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಹಂಪಿ ಕನ್ನಡ ವಿ.ವಿ. ಹೊರತಂದಿರುವ ‘ಹಾಲುಮತ ವ್ಯಾಸಂಗ’ ಪುಸ್ತಕದಲ್ಲಿ ಪ್ರಕಟವಾಗಿದೆ. ಆದರೆ, ಚಿಕ್ಕಣ್ಣ ಯಣ್ಣೆಕಟ್ಟೆ ಅವರು ತಮ್ಮ ‘ಹಾಲುಮತ ಹಾಡುಗಳು’ ಕೃತಿಯಲ್ಲಿ ನನ್ನ ಪದ್ಯವನ್ನು ಯಥಾವತ್ತಾಗಿ ಬಳಸಿಕೊಂಡಿದ್ದಾರೆ. ಕನಿಷ್ಠ ನನ್ನ ಗಮನಕ್ಕೂ ತಂದಿಲ್ಲ. ಕನ್ನಡ ವಿ.ವಿ.ಯ ಹಾಲುಮತ ಅಧ್ಯಯನ ಪೀಠದ ಮುಖ್ಯಸ್ಥ ಎಫ್‌.ಟಿ. ಹಳ್ಳಿಕೇರಿ ಅವರ ಚಿತಾವಣೆಯಿಂದ ಹೀಗಾಗಿದೆ’ ಎಂದು ಆರೋಪಿಸಿದರು.

‘ಹಂಪಿ ಕನ್ನಡ ವಿ.ವಿ. ಬೆಳ್ಳಿಹಬ್ಬದ ಅಂಗವಾಗಿ 2017ರ ಸೆ.9ರಂದು ನಡೆದ ಸಮಾರಂಭದಲ್ಲಿ ‘ಹಾಲುಮತ ಹಾಡುಗಳು’ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಿಡುಗಡೆಗೊಳಿಸಿ ಅಪಚಾರ ಮಾಡಿದ್ದಾರೆ. ಕೃತಿಚೌರ್ಯ ವಿಷಯವಾಗಿ ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರಿಗೆ ದೂರು ನೀಡಿದ್ದೆ. ಅವರ ನಿರ್ದೇಶನದ ಮೇರೆಗೆ ಜ.29ರಂದು ವಿ.ವಿ. ಸಿಂಡಿಕೇಟ್‌ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ಕೃತಿಚೌರ್ಯ ಆಗಿರುವುದು ಅವರ ಗಮನಕ್ಕೆ ಬಂದಿದೆ.

ADVERTISEMENT

‘ಹಾಲುಮತ ಹಾಡುಗಳು’ ಎರಡನೇ ಆವೃತ್ತಿಯಲ್ಲಿ ಪೂಜಾರ ಅವರ ಪದ್ಯವನ್ನು ಕೈಬಿಡಬೇಕು ಎಂಬ ತೀರ್ಮಾನತೆಗೆದುಕೊಳ್ಳಲಾಗಿದೆ. ಆದರೆ, ತಪ್ಪಿತಸ್ಥರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿಲ್ಲ. ಹಾಗಾಗಿ ಯಣ್ಣೆಕಟ್ಟೆ ಮತ್ತು ಹಳ್ಳಿಕೇರಿ ವಿರುದ್ಧ ಕ್ರಮ ಜರುಗಿಸಲೇಬೇಕು. ಇಂತಹ ಘಟನೆಗಳು ಭವಿಷ್ಯದಲ್ಲಿ ಆಗಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದೇನೆ’ ಎಂದರು.

ಈ ಕುರಿತು ಕನ್ನಡ ವಿ.ವಿ. ಕುಲಪತಿ ಪ್ರೊ.ಮಲ್ಲಿಕಾ ಎಸ್‌. ಘಂಟಿ ಅವರನ್ನು ಸಂಪರ್ಕಿಸಿದಾಗ, ‘ಕೃತಿಚೌರ್ಯ ಆಗಿರುವುದು ಗಮನಕ್ಕೆ ಬಂದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಕೂಡ ನೀಡಿದ್ದೇವೆ. ಹೀಗಿದ್ದೂ ಧರಣಿ ನಡೆಸಿದ್ದು ಅವರಿಗೆ ಶೋಭೆ ತರುವ ವಿಚಾರವಲ್ಲ’ ಎಂದು ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.