ADVERTISEMENT

ವಿಸ್ತರಣೆಗೆ: ಅನಂತಪುರರ ರಸ್ತೆ ಸಮೀಕ್ಷೆ

ವಿಸ್ತರಣೆಗೆ: ಅನಂತಪುರರ ರಸ್ತೆ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 6:00 IST
Last Updated 10 ಜೂನ್ 2013, 6:00 IST

ಬಳ್ಳಾರಿ: ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಅಗತ್ಯವಿದ್ದಲ್ಲಿ ರಸ್ತೆ ವಿಸ್ತರಣೆ ಮಾಡಲು ಯೋಜನೆ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಮಹಾನಗರ ಆಲಿಕೆಯ ಅಧಿಕಾರಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ಸಮೀಕ್ಷೆ ನಡೆಸಿದರು.

ನಗರದ ಗಡಗಿ ಚೆನ್ನಪ್ಪ ವೃತ್ತದಿಂದ ಬೈಪಾಸ್‌ವರೆಗೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಲಹೆಯ ಮೇರೆಗೆ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಸಮೀಕ್ಷೆ ನಡೆಸಿದ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ವಾಹನಗಳ ಸುಗಮ ಸಂಚಾರಕ್ಕೆ ನೆರವಾಗುವ ನಿಟ್ಟಿನಲ್ಲಿ 5ರಿಂದ 10 ಅಡಿವರೆಗೆ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವ ಸುಳಿವು ನೀಡಿದರು.

ಗಡಿಗಿ ಚೆನ್ನಪ್ಪ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಇತ್ತೀಚೆಗೆ ವಾಹನ ಹಾಗೂ ಜನಸಂಚಾರ ಅಧಿಕ ಆಗುತ್ತಿರುವುದರಿಂದ ರಸ್ತೆ ಅಗಲೀಕರಣ ಮಾಡುವ ಸಾಧ್ಯತೆ ಇದೆ. ಇದರ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೌರಾಯುಕ್ತ ಡಿ.ಎಲ್. ನಾರಾಯಣ ತಿಳಿಸಿದರು.

ನಗರದ ಅನಂತಪುರ ರಸ್ತೆಯಲ್ಲಿ ರಾಯಲ್ ಚಿತ್ರಮಂದಿರ, ರಾಯಲ್ ಟೂರಿಸ್ಟ್ ಹೋಂ ಸೇರಿದಂತೆ ಹಲವಾರು ಕಟ್ಟಡಗಳಿದ್ದು, ಡಾ.ರಾಜ್‌ಕುಮಾರ್ ರಸ್ತೆಗುಂಟ ಅನೇಕ ಕಟ್ಟಡಗಳು ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಲಿವೆ.

ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಅನಿವಾರ್ಯವಾಗಲಿದೆ. ಆದರೆ, ತೆರವುಗೊಳಿಸುವ ಕುರಿತು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು.

ರಸ್ತೆ ಅಗಲೀಕರಣ ಮಾಡುವುದೇ ಆದಲ್ಲಿ ಎಷ್ಟು ಅಡಿಗಳವರೆಗಿನ ತೆರವಿಗೆ ಕ್ರಮ ಕೈಗೊಳ್ಳಬೇಕು, ಕಟ್ಟಡಗಳನ್ನು ತೆರವುಗೊಳಿಸಿದಲ್ಲಿ ನೀಡಬೇಕಾಗುವ ಪರಿಹಾರ ಮತ್ತು ಪರ್ಯಾಯ ವ್ಯವಸ್ಥೆ ಕುರಿತು ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಆದೇಶ ನೀಡಿದಲ್ಲಿ ರಸ್ತೆ ಅಗಲೀಕರಣ ಅನಿವಾರ್ಯವಾಗಲಿದೆ.

 ಈ ನಿಟ್ಟಿನಲ್ಲಿ ಸಮೀಕ್ಷೆ, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು. ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶರಣಪ್ಪ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.