ADVERTISEMENT

ವೃತ್ತಿ ಅನುಭವದಿಂದ ಪರಿಣಿತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 7:15 IST
Last Updated 22 ಜನವರಿ 2011, 7:15 IST

ಹೊಸಪೇಟೆ: ‘ಶೈಕ್ಷಣಿಕವಾಗಿ ಪಡೆದ ಪದವಿಗಳ ಶಿಕ್ಷಣಕ್ಕಿಂತ ವೃತ್ತಿ ಬದುಕಿನಲ್ಲಿ ಪಡೆಯುವ ಅನುಭವದ ಶಿಕ್ಷಣ ನಮ್ಮನ್ನು ಪರಿಣಿತರನ್ನಾಗಿಸುತ್ತದೆ’ ಎಂದು ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಬಿ.ಎಸ್. ನಾಯ್ಕ ಅಭಿಪ್ರಾಯಪಟ್ಟರು.

ತಾಲ್ಲೂಕು ಕಾನೂನು ನೆರವು ಸಮಿತಿ, ವಕೀಲರ ಸಂಘ ಹಾಗೂ ರಾಜ್ಯ ವಕೀಲರ ಪರಿಷತ್ ಸಹಯೋಗದಲ್ಲಿ ಶುಕ್ರವಾರ ನಗರದ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಕಾನೂನು ಸಲಹಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಾಯೋಗಿಕ ಅನುಭವ ಹಂಚಿಕೊಳ್ಳುವ ಕಾನೂನು ಸಲಹೆ ಕಾರ್ಯಾಗಾರದಲ್ಲಿ ಕಿರಿಯ ವಕೀಲರು ಸಕ್ರಿಯವಾಗಿ ಭಾಗವಹಿಸವ ಮೂಲಕ ವೃತ್ತಿ ನೈಪುಣ್ಯವನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

ಹಿರಿಯ ವಕೀಲರು ಹೊಸದಾಗಿ ಸೇವೆಗೆ ಬರುತ್ತಿರುವ ಯುವ ವಕೀಲರಿಗೆ ಅಗತ್ಯ ಸಲಹೆ ಜತೆಗೆ ಮಾರ್ಗದರ್ಶನ ನೀಡಬೇಕು. ವಕೀಲರಿಗೆ ನಿವೃತ್ತಿ ಎಂಬುವುದೇ ಇಲ್ಲ. ಕಕ್ಷಿದಾರರಿಗೆ ಹಾಗೂ ದುರ್ಬಲ ವರ್ಗದವರಿಗೆ ನ್ಯಾಯ ಒದಗಿಸಲು ನಿರಂತರವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ವಿಶಾಲ ವ್ಯಾಪ್ತಿ ಹೊಂದಿರುವ ಸಮಾಜದ ಎಲ್ಲಾ ರಂಗಗಳಲ್ಲಿಯೂ ಬಹುಮುಖ್ಯವಾಗಿರುವ ವಕೀಲ ವೃತ್ತಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ರಾಜ್ಯ ವಕೀಲ ಪರಿಷತ್ ಸದಸ್ಯ ವಿ.ವೈ.ಹಾಲಪ್ಪ ಹಾಗೂ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಪ್ರಹ್ಲಾದ್ ಮಾತನಾಡಿದರು.

ಕಾರ್ಯಾಗಾರದಲ್ಲಿ ನಿವೃತ್ತ ಪತ್ರ ಬರಹಗಾರ ಸಿ. ಅಶ್ವತ್ಥಪ್ಪ ಹಾಗೂ ಹಿರಿಯ ವಕೀಲ ಎಂ.ಸಿ. ಬಂಡಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ವಕೀಲರ ಸಂಘದ ಪದಾಧಿಕಾರಿಗಳು ಹಿರಿಯ ಕಿರಿಯ ವಕೀಲರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.