ADVERTISEMENT

ವೇಣಿವೀರಾಪುರದಲ್ಲಿ ನೀರಿನ ಸಮಸ್ಯೆ

ಗ್ರಾಮದ ಜನರ ಪರದಾಟ ಕೇಳುವವರಿಲ್ಲ

​ಪ್ರಜಾವಾಣಿ ವಾರ್ತೆ
Published 17 ಮೇ 2018, 8:14 IST
Last Updated 17 ಮೇ 2018, 8:14 IST
ಖಾಲಿ ಕೊಡದೊಂದಿಗೆ ಗ್ರಾಮದ ಮಹಿಳೆಯರು
ಖಾಲಿ ಕೊಡದೊಂದಿಗೆ ಗ್ರಾಮದ ಮಹಿಳೆಯರು   

ತೋರಣಗಲ್ಲು: ಸಮೀಪದ ವೇಣಿವೀರಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಈ ಗ್ರಾಮ ಮೊದಲು ಕುಡಿತಿನಿ ಗ್ರಾಮ ಪಂಚಾಯಿತಿಗೆ ಸೇರಿತ್ತು.ಆದರೆ ಅದು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಗ್ರಾಮ ಯಾವ ಪಂಚಾಯಿತಿಯ ವ್ಯಾಪ್ತಿಗೂ ಸೇರಿಲ್ಲ. ಹೀಗಾಗಿ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಯಾರಿಗೆ ದೂರು ಅರ್ಜಿ ಕೊಡಬೇಕು ಎಂಬುದೂ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ.

ಎರಡು ಸಾವಿರ ಜನಸಂಖ್ಯೆಯುಳ್ಳ ಗ್ರಾಮದ ಸಮೀಪದಲ್ಲೇ ಎಚ್.ಎಲ್.ಸಿ. ಕಾಲುವೆ ಹಾದು ಹೋಗಿದ್ದರೂ ಶಾಶ್ವತ ಕುಡಿಯುವ ನೀರಿನ ಸೌಕರ್ಯ ಇಲ್ಲ.

ADVERTISEMENT

ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದ ಶುದ್ಧ ನೀರಿನ ಘಟಕ ಆರು ತಿಂಗಳಿಂದ ಕೆಟ್ಟಿದೆ. ಕುಡಿಯುವ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ದುರಸ್ತಿ ಕಾರ್ಯ ಮಾತ್ರ ನಡೆದಿಲ್ಲ.

ಅಲೆದಾಟ: ಗ್ರಾಮಸ್ಥರು ನೀರಿಗಾಗಿ 6 ಕಿ.ಮೀ. ದೂರದಲ್ಲಿರುವ ಕುಡಿತಿನಿಗೆ ಬೈಕ್ ಮತ್ತು ಬೈಸಿಕಲ್‌ಗಳಲ್ಲಿ ತೆರಳಿ ಅಲ್ಲಿನ ಖಾಸಗಿ ನೀರಿನ ಘಟಕದಿಂದ ಪ್ರತಿ ಕೊಡಕ್ಕೆ ₹ 10 ನೀಡಿ ನೀರು ಖರೀದಿಸಿ ತರುತ್ತಿದ್ದಾರೆ. ತೋರಣಗಲ್ಲಿನಿಂದ ಗ್ರಾಮಕ್ಕೆ ಕೆಲವುದಿನ ಖಾಸಗಿ ಶುದ್ಧ ಕುಡಿಯುವ ನೀರಿನ ಟ್ಯಾಂಕರ್ ಬರುತ್ತಿರುವುದರಿಂದ ಸನ್ನಿವೇಶ ಬಿಗಡಾಯಿಸಿಲ್ಲ.

‘ಈ ಹಿಂದೆ ಎಷ್ಟೋ ಬಾರಿ ಗ್ರಾಮಕ್ಕೆ ನೀರು ಪೂರೈಸುವ ನೀರಿನ ಪಂಪ್‌ ಸುಟ್ಟಿತ್ತು. ಅದನ್ನು ನಮ್ಮ ಹಣದಿಂದಲೇ ದುರಸ್ತಿ ಮಾಡಿಸಿದೆವು. ಹಲವು ಬಾರಿ ಜಿಲ್ಲಾ ಪಂಚಾಯಿತಿ ಮನವಿ ಸಲ್ಲಿಸಿದ್ದರೂ ಪ್ರಯೋಜವಾಗಿಲ್ಲ’ ಎಂದು ಗ್ರಾಮದ ದಸಂಸ ಗ್ರಾಮ ಘಟಕದ ಅಧ್ಯಕ್ಷ ಶಿವುಕುಮಾರ ತಿಳಿಸಿದರು.

‘ಕೆಲವು ದಿನಗಳ ಹಿಂದೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್ ಮನೋಹರ್‌ ಭೇಟಿ ಕೊಟ್ಟು ಸಮಸ್ಯೆಯನ್ನು ಆಲಿಸಿದ್ದರು. ಇಲ್ಲಿವರೆಗೂ ಸ್ಪಂದಿಸಿಲ್ಲ’ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.