ADVERTISEMENT

ವೈದ್ಯರ ಮೇಲೆ ಹಲ್ಲೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 6:40 IST
Last Updated 9 ಜೂನ್ 2011, 6:40 IST

ಸಿರುಗುಪ್ಪ: ಸರ್ಕಾರಿ ಆಸ್ಪತ್ರೆಯ ವೈದ್ಯರ ಮೇಲೆ ಮಂಗಳವಾರ ನಡೆದ ಹಲ್ಲೆಯನ್ನು ಖಂಡಿಸಿ ಇಲ್ಲಿಯ ಸರ್ಕಾರಿ ಮತ್ತು ಖಾಸಗಿ ವೈದ್ಯರು ಸೇವೆಗೆ ಗೈರು ಹಾಜರಾಗಿ ಪಟ್ಟಣದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಹಲ್ಲೆ ನಡೆಸಿದವರ ಮೇಲೆ ಸೂಕ್ತಕ್ರಮ ಕೈ ಗೊಳ್ಳಲು ಒತ್ತಾಯಿಸಿದರು.

ಹಾವು ಕಚ್ಚಿದ ಬಾಲಕಿಗೆ ಸೂಕ್ತ ಚಿಕಿತ್ಸೆ ನೀಡದೇ ಸಾವನ್ನಪ್ಪಿದ್ದಾಳೆ ಎಂಬ  ದೂರಿನ ಹಿನ್ನೆಲೆಯಲ್ಲಿ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿಗಳ ಮೇಲೆ ಗುಂಪು ಹಲ್ಲೆ ನಡೆಸಿದ್ದನ್ನು ಖಂಡಿಸಿ ಇಂದು   ವೈದ್ಯರು ಪಟ್ಟಣದ ಅಭಯಾಂಜಿನೇಯ ದೇವ ಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿಗೆ ತೆರಳಿ ತಪ್ಪಿಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉಪ ತಹಸೀಲ್ದಾರ ಯಲ್ಲಪ್ಪರಿಗೆ ಮನವಿ ಪತ್ರ ಅರ್ಪಿಸಿದರು.

ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಭಾರತೀಯ ವೈದ್ಯಕೀಯ ಸಂಘದ ವೈದ್ಯರುಗಳು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ಈ ಘಟನೆಯಿಂದ ವೈದ್ಯಾಧಿಕಾರಿ ಗಳು ಹಾಗೂ ಸಿಬ್ಬಂದಿ ವರ್ಗ ಮಾನಸಿಕವಾಗಿ ಘಾಸಿಗೊಂಡಿದ್ದೇವೆ, ಭಯದ ವಾತಾವರಣ ಉಂಟಾಗಿದೆ. ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೆೀವೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಂಪತ್‌ರಾಜ್ ಪತ್ರಿಕೆಗೆ ತಿಳಿಸಿದರು.

ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ವ್ಯಕ್ತಪಡಿಸುವ ಇಂಗಿತ ವಿದ್ದರೂ ಸಾರ್ವಜನಿಕರ ಹಿತದೃಷ್ಟಿ ಯಿಂದ ಹಾಗೂ ಶಾಸಕರ ಮನವಿ ಮೇರೆಗೆ ಈ ಒಂದು ದಿನ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೆೀವೆ ಎಂದರು.

ತಾಲ್ಲೂಕು ಭಾರತೀಯ ವೈದ್ಯ ಕೀಯ ಸಂಘದ ಪದಾಧಿಕಾರಿಗಳಾದ ಡಾ.ಮಧುಸೂಧನ ಕಾರಿಗನೂರು, ಡಾ.ಅಚ್ಯುತ್‌ಕುಮಾರ್ ಮಾತನಾಡಿ, ಈ ದೌರ್ಜನ್ಯವನ್ನು ಖಂಡಿಸುತ್ತಾ ವೈದ್ಯರ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿ, ತಮ್ಮ ಚಿಕಿತ್ಸಾಲಯಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲಿಕಾ ರ್ಜುನರೆಡ್ಡಿ ಮಾತನಾಡಿ, ಈ ಘಟನೆ ಖಂಡನೀಯವಾಗಿದ್ದು ಇಂತಹ ಘಟನೆ ಗಳು ಮರುಕಳಿಸದಂತೆ ಪದಾಧಿಕಾರಿ ಗಳಲ್ಲಿ ಚರ್ಚಿಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.