ADVERTISEMENT

ಶಾಲಾ ದಾಖಲಾತಿ ಪ್ರಕ್ರಿಯೆ ಪ್ರಾರಂಭ

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 9:23 IST
Last Updated 3 ಜನವರಿ 2014, 9:23 IST

ಬಳ್ಳಾರಿ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಧಿನಿಯಮ–   -2009ರ ಅನ್ವಯ 2014– -15ನೇ ಸಾಲಿಗಾಗಿ ಜಿಲ್ಲೆಯ ಎಲ್ಲಾ ಖಾಸಗಿ ಅನುದಾನ ರಹಿತ (ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ) ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಪ್ರಾರಂಭ ಗೊಂಡಿದೆ.

ಕಾಯ್ದೆಯ ಅನ್ವಯ ಶಾಲೆಯ ನೆರೆಹೊರೆಯಲ್ಲಿ ವಾಸಿಸುವ ವಿದ್ಯಾರ್ಥಿಗಳಿಗಾಗಿ ಶೇ. 25ರಷ್ಟು ಸ್ಥಾನಗಳನ್ನು ಕಾಯ್ದಿರಿಸಿರುವ ಬಗ್ಗೆ ಶಾಲಾವಾರು ಪಟ್ಟಿಯು ಈಗಾಗಲೇ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ.

ಪಟ್ಟಿಯಲ್ಲಿರುವ ಶಾಲೆಗಳ 1ನೇ ತರಗತಿ, ಪೂರ್ವ ಪ್ರಾಥಮಿಕ ತರಗತಿ (ಯಾವುದು ಆರಂಭಿಕ ತರಗತಿ ಆಗಿರುತ್ತದೋ ಆ ತರಗತಿ)ಗಳಿಗೆ ಮಕ್ಕಳನ್ನು ದಾಖಲು ಮಾಡುವ ಅರ್ಜಿ ಮತ್ತಿತರ ನಮೂನೆಗಳನ್ನು ಸಂಬಂಧಿ ಸಿದ ಶಾಲೆ/ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪಡೆಯಬಹುದು.

ಶಾಲಾ ಮುಖ್ಯಸ್ಥರು ಮಕ್ಕಳ ದಾಖಲಾತಿ ಪ್ರಕ್ರಿಯೆಯಲ್ಲಿ ಶೇ. 25ರಷ್ಟು ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಶೇ. 7.5ರಷ್ಟು, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ಶೇ. 1.5ರಷ್ಟು ಹಾಗೂ ಉಳಿದ ಶೇ. 16ರಷ್ಟು ಸ್ಥಾನಗಳನ್ನು ಇತರೆ ಹಿಂದುಳಿದ ವರ್ಗ(ಪ್ರವರ್ಗ-–1, ಪ್ರವರ್ಗ-– 2ಎ, ಪ್ರವರ್ಗ-–2ಬಿ, ಪ್ರವರ್ಗ– -3ಎ, ಪ್ರವರ್ಗ-3ಬಿ, ಅನಾಥರು, ಅಲೆಮಾರಿ ಮತ್ತು ಬೀದಿ ಮಕ್ಕಳು, ಎಚ್ಐವಿ ಪೀಡಿತರ ಮಕ್ಕಳು ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳು)ಗಳ ಮಕ್ಕಳಿಗಾಗಿ ಆಯಾ ಶಾಲೆಗಳಲ್ಲಿ ಕಾಯ್ದಿರಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಒಂದೇ ಆವರಣದಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆ ಗಳು ನಡೆಯುತ್ತಿದ್ದಲ್ಲಿ, ಯಾವುದು ಪ್ರಾರಂಭಿಕ ತರಗತಿ ಇರುತ್ತದೆಯೋ ಆ ತರಗತಿ (ಪೂರ್ವ ಪ್ರಾಥಮಿಕ ಅಥವಾ 1 ನೇ ತರಗತಿ)ಗೆ ಶೇ. 25ರಷ್ಟು ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಅವಕಾಶವಿರುತ್ತದೆ.  ಸ್ವತಂತ್ರ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಶೇ. 25 ಅನ್ವಯಿಸುವುದಿಲ್ಲ.

ಶಾಲೆ ಪ್ರವೇಶಕ್ಕೆ ಶೇ. 25ರ ಅಡಿ ಹೆಚ್ಚು ಅರ್ಜಿಗಳು ಬಂದಲ್ಲಿ ಪಾಲಕ, ಪೋಷಕರ ಹಾಗೂ ಇಲಾಖೆ ಪ್ರತಿನಿಧಿಗಳ ಸಮ್ಮುಖದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಬೇಕು. ನಿಗದಿಪಡಿಸಿದ ಸೀಟುಗಳಿಗಿಂತ ಕಡಿಮೆ ಅರ್ಜಿಗಳು ಬಂದಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಆಯ್ಕೆಯಾದ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಂದ ಅನುಮೋದಿಸಿಕೊಳ್ಳಬೇಕು.  ನಂತರ ಶಾಲಾ ಮುಖ್ಯಸ್ಥರು ವಿದ್ಯಾರ್ಥಿಗಳ ದಾಖಲಾತಿಯನ್ನು ಯಾವುದೇ ಶುಲ್ಕ ಪಡೆಯದೇ ಉಚಿತವಾಗಿ ಮಾಡಿಕೊಳ್ಳಬೇಕು.

ಮಾಹಿತಿ ಶಿಕ್ಷಣ ಹಕ್ಕು ಅಧಿನಿಯಮ-– 2009ರಂತೆ ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳು ಸಹ ಇದರ ವ್ಯಾಪ್ತಿಗೆ ಒಳಪಡುತ್ತವೆ. ಆಸಕ್ತರು ಈ ಶಾಲೆಗಳಿಗೂ ಪ್ರವೇಶ ಅರ್ಜಿ ಸಲ್ಲಿಸಬಹುದು. ದಾಖಲಾತಿ ಕೋರಿ ಪೋಷಕರು ಫೆಬ್ರುವರಿ 8ರೊಳಗಾಗಿ ಸಂಬಂಧಿಸಿದ ಶಾಲೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಗಳನ್ನು ಸ್ವೀಕರಿಸಿದ ಶಾಲೆಯು ನಿಯ ಮಾನುಸಾರ ಪರಿಶೀಲನೆ ನಡೆಸಿ ಫೆಬ್ರುವರಿ 17ರೊಳಗಾಗಿ ವಿದ್ಯಾರ್ಥಿ ಗಳನ್ನು ಆಯ್ಕೆ ಮಾಡಿ ಫೆ.28 ರೊಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮೋದನೆ ಪಡೆಯಬೇಕು.    ಮಾರ್ಚ್‌ 3ರಿಂದ ಶಾಲೆಗಳಿಗೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ.  ಹೆಚ್ಚಿನ ಮಾಹಿತಿಗಾಗಿ  ಟೋಲ್ ಫ್ರೀ ನಂ. 1800-425-11009 ಅಥವಾ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.