ADVERTISEMENT

ಸಂಕಷ್ಟದಲ್ಲಿ ಗಣೇಶ ಮೂರ್ತಿ ತಯಾರಿಕರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 5:42 IST
Last Updated 6 ಸೆಪ್ಟೆಂಬರ್ 2013, 5:42 IST

ಮರಿಯಮ್ಮನಹಳ್ಳಿ: ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಜನರ ಅಭಿರುಚಿಗೆ ತಕ್ಕಂತೆ ನವನವೀನ ವಿನ್ಯಾಸದ ವಿನಾಯಕನ ಮೂರ್ತಿಗಳು ಮಾರುಕಟ್ಟೆಯಲ್ಲಿ ಜನರ ಖರೀದಿಗಾಗಿ ಕಾಯುತ್ತಿವೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳೊಂದಿಗೆ ಸಂಪ್ರಾದಾಯಿಕ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳು ಪೈಪೋಟಿ ಎದುರಿಸುವಂತಾಗಿದೆ.

ಮಣ್ಣಿನ ಮೂರ್ತಿಗಳು ಶ್ರೇಷ್ಠ ಎನ್ನುವುದು ಜನರ ನಂಬಿಕೆ. ಆದರೆ ಆಧುನಿಕ ವಿನ್ಯಾಸದಲ್ಲಿ ಮಾಡಿದ ಮೂರ್ತಿಗಳ ಭರಾಟೆಯಲ್ಲಿ ಸಂಕಷ್ಟಹರನ ಮಣ್ಣಿನಿಂದ ಮೂರ್ತಿಗಳನ್ನು ಮಾಡಿ ಮಾರಿ ಬದುಕುವ ಕುಟುಂಬಗಳು ಸಂಕಷ್ಟ ಪಡುವಂತಾಗಿವೆ. ಒಂದೆಡೆ ಕಳೆದ ಎರಡು ವರ್ಷಗಳ ಕಾಲ ಎದುರಿಸಿದ ಬರಗಾಲ, ದರ ಪೈಪೋಟಿ ಹಾಗೂ ಆಧುನಿಕತೆಯ ಭರಾಟೆ ನಡುವೆ ಗ್ರಾಮೀಣ ಪ್ರದೇಶದ ಕಲಾವಿದರಿಗೆ ಬೆಲೆ ಇಲ್ಲದಂತಾಗಿದೆ. ಮೂರ್ತಿಗಳನ್ನು ಕೇಳುವವರೂ ಇಲ್ಲವಾಗಿದ್ದಾರೆ.

ತಲೆತಲಾಂತರದಿಂದ ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ನಾಲೈದು ಕುಟುಂಬಗಳು ಪಟ್ಟಣದಲ್ಲಿವೆ. ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾದ ನಾರಾಯಣದೇವರ ಕೆರೆಯಿಂದ ಇಲ್ಲಿ ಬಂದು ನೆಲೆಸಿದ ಜಿನ್ನಗಾರ (ಚಿತ್ರಗಾರ) ಕುಟುಂಬಗಳು ಅಜ್ಜ ಮುತ್ತಜ್ಜನ ಕಾಲದಿಂದಲೂ ಇದನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಅವರ ಕೈಚಳಕದಲ್ಲಿ ಗಣೇಶ ಮಾತ್ರವಲ್ಲ; ಅನೇಕ ವಿನ್ಯಾಸದ ಮೂರ್ತಿಗಳು ರೂಪಪಡೆದಿವೆ. ನೋಡುಗರ ಗಮನ ಸೆಳೆಯುವಂತೆ ಮಾಡುವುದು ಅವರ ಕಲಾಶೈಲಿ. ಅಷ್ಟಾದರೂ ಅವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದಿರುವ ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳ ಬಗ್ಗೆ ಆತಂಕ. ಅದು ತಮ್ಮ ವೃತ್ತಿ ಕಸುಬಿಗೆ ತೊಂದರೆ ಆಗುತ್ತಿದೆ ಎಂಬುದಲ್ಲ, ಪರಿಸರವನ್ನು ಹಾಳು ಮಾಡುತ್ತದೆ. ಜಲಮೂಲವು ವಿಷಯುಕ್ತವಾಗುತ್ತದೆ ಎಂಬ ಭೀತಿ ಕಾಡುತ್ತಿದೆ ಎನ್ನುತ್ತಾರೆ ಚಿತ್ರಗಾರ ವೀರಾಂಜಿನೇಯ.

ಬಸವ ಜಯಂತಿಯಿಂದ ವಿಗ್ರಹ ತಯಾರಿ ಆರಂಭಿಸುವರು. ಮಣ್ಣಿನ ಮೂರ್ತಿಗಳಿಗೆ ಕೆರೆಯಲ್ಲಿ ಸಿಗುವ ಮಣ್ಣು ಶ್ರೇಷ್ಠ. ಮಳೆಗಾಲ ಆರಂಭಕ್ಕೆ ಮುಂಚೆ ಮಣ್ಣನ್ನು ಶೇಖರಿಸುವರು. ಹಬ್ಬಕ್ಕೆ ನಾಲ್ಕು ತಿಂಗಳ ಮೊದಲು ಮಣ್ಣನ್ನು ಹದಗೊಳಿಸಿ, ಆಕಾರಕ್ಕೆ ತಕ್ಕಂತೆ ಮಣ್ಣನ್ನು ಚೆನ್ನಾಗಿ ಹದಗೊಳಿಸಿ ವಿವಿಧ ವಿನ್ಯಾಸದ ವಿಗ್ರಹಗಳನ್ನು ತಯಾರಿಸುವ ಕಾರ್ಯ ಕೈಗೊಳ್ಳುವರು.

ಜನರ ಅಭಿರುಚಿಗೆ ತಕ್ಕಂತೆ ಅರ್ಧ ಅಡಿಯಿಂದ ಮೂರ್ನಾಲ್ಕು ಅಡಿ, ಕೆಲವನ್ನು ಹತ್ತು ಅಡಿ ಎತ್ತರದ ವರೆಗಿನ ವಿಗ್ರಹಗಳನ್ನು ತಯಾರಿಸುವರು. ಮೊದಲೇ ಬೇಡಿಕೆ ತಿಳಿಸಿದರೆ ಅವರ ಅಭಿರುಚಿಗೆ ತಕ್ಕಂತೆ ಹೊಸ ವಿನ್ಯಾಸದ ವಿಗ್ರಹಗಳನ್ನು ತಯಾರಿಸುವರು. ಮೂಷಿಕನ ಮೇಲೆ ಕುಳಿತ ಗಣೇಶ, ಕಮಲದ ಹೂವಿನ ಮೇಲೆ ಆಸೀನ ಗಣಪತಿ, ಗೋಪಾಲಕೃಷ್ಣನ ಆಕಾರದ ಗಣೇಶ, ಹಾವಿನ ಹೆಡೆಯ ಕೆಳಗಡೆ ನಿಂತ ಗಣೇಶ, ಸಿಂಹಾಸನದ ಮೇಲೆ ವಿರಾಜಮಾನನಾದ ಗಣೇಶ ಸೇರಿದಂತೆ ಹಲವು ವೈವಿಧ್ಯಮಯ ವಿನ್ಯಾಸದ ಮೂರ್ತಿಗಳು ಅವರ ಕೈಚಳಕದಲ್ಲಿ ಮೂಡುತ್ತವೆ.

ಆಧುನಿಕತೆಯ ವೈಭೋಗದಲ್ಲಿ ಕಲಾವಿದರ ವಿಗ್ರಹ ಮಾಡುವ ಕಲೆ ಅಳಿಯ ಬಾರದು ಅದಕ್ಕೆಎಷ್ಟೇ ತೊಡರುಗಳಿದ್ದರೂ, ಎಷ್ಟೇ ಶ್ರಮದಿಂದ ತಯಾರಿಸಿದರೂ, ಲಾಭ ಬರದಿದ್ದರೂ ಪಾರಂಪರಿಕವಾಗಿ ನಡೆದು ಬಂದ ಸಂಪ್ರದಾಯವನ್ನು ಕೈಬಿಡುವುದಿಲ್ಲ. ಕಚ್ಚಾವಸ್ತು, ಬಣ್ಣಗಳ ಬೆಲೆ ಗಗನಕ್ಕೇರಿದೆ. ಈ ದಿನಗಳಲ್ಲಿ ಮಣ್ಣಿನಲ್ಲಿ ಮೂರ್ತಿ ತಯಾರಿಸುವುದು ಕಷ್ಟ ಎನ್ನುತ್ತಾರೆ ಆಂಜಿನೇಯ.

`ನಮ್ಮ ಕಲೆ ಇಲ್ಲಿಗೇ ಕೊನೆಗೊಳ್ಳಬಾರದು. ನಮ್ಮ ಪೂರ್ವಜರು ಆಚರಿಸಿಕೊಂಡು ಬಂದ ಪದ್ಧತಿಯಂತೆ ಮಣ್ಣಿನ ವಿಗ್ರಹ ತಯಾರಿಸುತ್ತಿದ್ದೇವೆ. ಪ್ಲಾಸ್ಟರ್ ಆಫ್ ಪ್ಯಾರೀಸ್‌ನ ಮೂರ್ತಿಗಳ ಜೊತೆಗೆ ಪೈಪೋಟಿ ನಡೆಸಲು ಆಗುವುದಿಲ್ಲ. ಆದರೆ ಗ್ರಾಹಕರ ಅಭಿರುಚಿ ಇದಕ್ಕೆ ವಿಭಿನ್ನವಾಗಿದೆ. ಮಣ್ಣಿನ ಮೂರ್ತಿಗಳಿಗೆ ಕಡಿಮೆಯಾಗುತ್ತಿವೆ. ಎಲ್ಲರೂ ಚಂದಕ್ಕೆ ಮರುಳಾಗುತ್ತಿದ್ದಾರೆ. ಅದರಿಂದಾಗಿ ನಾವು ನಷ್ಟನುಭವಿಸುವಂತಾಗಿದೆ. ಪರಿಸರಕ್ಕೆ ಹಾನಿಯಾಗುವಂತಹ ಮೂರ್ತಿಗಳ ಮೇಲೆ ನಿಯಂತ್ರಣ ಹೇರಿದರೆ ಅನುಕೂಲ ಎಂಬುದು ಕಲಾವಿದರ ಅನಿಸಿಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.