ADVERTISEMENT

ಸಂಘಟಿತರಾಗಲು ಗಂಗಾಮತಸ್ಥರಿಗೆ ಜಾಲಗಾರ ಮನವಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 9:50 IST
Last Updated 19 ಜನವರಿ 2011, 9:50 IST

ಕೂಡ್ಲಿಗಿ: ಬೆಸ್ತರು, ಅಂಬಿಗರು, ಮೀನುಗಾರರು ಬುಡಕಟ್ಟು ಸಮುದಾಯದ ಹಿನ್ನೆಲೆಯಿಂದ ಬಂದಿದ್ದರೂ, ಇದುವರೆಗೆ ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡದಿರುವುದು ಒಂದು ದುರಂತ  ಎಂದು ಗಂಗಾಮತ ಸಮುದಾಯದ ರಾಜ್ಯ ಮುಖಂಡ ಅಂಬಿಕಾ ಜಾಲಗಾರ ವಿಷಾದ ವ್ಯಕ್ತಪಡಿಸಿದರು.ಇಲ್ಲಿಯ ವಿನಾಯಕ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ತಾಲ್ಲೂಕು ಗಂಗಾಮತ ನೌಕರರ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಂಗಾಮತ ಸಮುದಾಯವು ಬೆಸ್ತ, ಕೋಲಿ, ಅಂಬಿಗ, ಬಾರಿಕ, ಸುಣಗಾರ, ಮೊಗವೀರ ಮುಂತಾದ 39 ಹೆಸರುಗಳಿಂದ ಕರೆಯಲ್ಪಡುತ್ತಿದೆ. ಈ ಸಮುದಾಯವು ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದರೂ ವಿವಿಧ ಸಂಸ್ಕೃತಿ, ಪ್ರದೇಶಗಳಲ್ಲಿ ಹಂಚಿ ಹೋಗಿದೆ.  ಇದರಿಂದ ರಾಜಕೀಯವಾಗಿಯೂ ಈ ಸಮುದಾಯ ಮೂಲೆಗುಂಪಾಗಲಿಕ್ಕೆ ಕಾರಣವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲಾ ಗಂಗಾಮತ ನೌಕರರ ಸಂಘದ ಅಧ್ಯಕ್ಷ ಯಂಕಪ್ಪ ಬಾರಕೇರ,  ಗಂಗಾಮತ  ಸಮುದಾಯ ಲಕ್ಷಕ್ಕೂ ಮಿಕ್ಕು ಜನಸಂಖ್ಯೆ ಹೊಂದಿದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಇದೀಗ ಸಂಘಟನೆಗೊಳ್ಳುವ ಸಂದರ್ಭ ಒದಗಿಬಂದಿದೆ ಎಂದು ಹೇಳಿದರು.ಬಳ್ಳಾರಿ ಪ್ರಗತಿ ಗ್ರಾಮೀಣ ಬ್ಯಾಂಕ್ ಅಧಿಕಾರಿ ಟಿ.ರಾಮಚಂದ್ರಪ್ಪ, ಸಿರುಗುಪ್ಪ ತಾಲ್ಲೂಕು ಗಂಗಾಮತ ನೌಕರರ ಸಂಘದ ಅಧ್ಯಕ್ಷ ವೆಂಕೋಬ, ಕಾರ್ಯದರ್ಶಿ ಈರಣ್ಣ, ಸಿಂಧನೂರು ತಾಲ್ಲೂಕು ಗಂಗಾಮತ ನೌಕರರ ಸಂಘದ ಅಧ್ಯಕ್ಷ ವೈ.ಎಸ್.ರಕ್ಕಸಗಿ, ವಿನಾಯಕ ಶಾಲೆಯ ಆಡಳಿತಾಧಿಕಾರಿ ವಿಜಯಲಕ್ಷ್ಮಿ, ಗಂಗಾಮತ ಸಮಾಜದ ಗುಲ್ಬರ್ಗಾ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಕಟ್ಟೆ ವಿರೂಪಾಕ್ಷಪ್ಪ, ಪ್ರಭು ತಲ್ವಾರ್ ಮುಂತಾದವರು ಉಪಸ್ಥಿತರಿದ್ದರು.

ಅಶ್ವಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಬಿ.ರಾಮು ಸ್ವಾಗತಿಸಿದರು. ಟಿ.ರಾಮಚಂದ್ರಪ್ಪ ವಂದಿಸಿದರು. ಟಿ.ತಿಂದಪ್ಪ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸಿರುಗುಪ್ಪ ತಾಲ್ಲೂಕು ಗಂಗಾಮತ ಸಮಾಜದ ಪದಾಧಿಕಾರಿಗಳು, ಗಜಾಪುರದ ಗಂಗಾ ಪರಮೇಶ್ವರಿ ಸ್ತ್ರೀ ಶಕ್ತಿ ಸಂಘದ ಮಹಿಳೆಯರು, ನೌಕರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.