ADVERTISEMENT

ಸಂಡೂರು: 205 ಶಿಕ್ಷಕರ ಹುದ್ದೆ ಖಾಲಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 4:36 IST
Last Updated 17 ಸೆಪ್ಟೆಂಬರ್ 2013, 4:36 IST

ಸಂಡೂರು: ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣ ದಲ್ಲಿ ಇತ್ತೀಚೆಗೆ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾ.ಪಂ.ಅಧ್ಯಕ್ಷೆ ಭರಮಕ್ಕ ಮಾತನಾಡಿ, ವಡ್ಡು ಗ್ರಾಮದ ಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಹುದ್ದೆ ಖಾಲಿ ಇರುವ ಕುರಿತು ಕ್ಷೇತ್ರ ಶಿಕ್ಷಣಾಧಿ ಕಾರಿಗಳನ್ನು ವಿಚಾರಿಸಿದಾಗ, ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಮೌನೇಶ್‌, ತಾಲ್ಲೂಕಿನಲ್ಲಿ ಒಟ್ಟು 205 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದ್ದು ಒಟ್ಟು 247 ಅರ್ಜಿಗಳು ಬಂದಿವೆ. ಆದರೆ, ಈ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದ್ದು, ಮೇಲಧಿಕಾರಿ ಗಳಿಂದ ಆದೇಶ ಬಂದ ಕೂಡಲೆ ನೇಮಕ ಮಾಡಲಾಗುವುದು ಎಂದರು.

ತಾಲ್ಲೂಕಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 1ರಿಂದ 10ನೇ ತರಗತಿಯ ವರೆಗೆ ಒಟ್ಟು 48163 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸೋಮಲಾಪುರ, ಭುಜಂಗನಗರ, ಕೋಡಾಲು, ಡಿ. ಅಂತಾಪುರ ಮುಂತಾದೆಡೆಯ 15 ಶಾಲಾ ಕಟ್ಟಡಗಳನ್ನು ದುರಸ್ತಿಗೊಳಿಸ ಬೇಕಿದೆ.

ಕೆ.ಗೊಲ್ಲರಹಟ್ಟಿ, ದೇವಗಿರಿ, ತೋಕೇನಹಳ್ಳಿ ಮುಂತಾದ 50 ಶಾಲೆಗಳಿಗೆ ಕಾಂಪೌಂಡ್ ಇಲ್ಲ. ಈ ಎಲ್ಲಾ ಶಾಲೆಗಳಲ್ಲಿ ಒಟ್ಟು 6300 ಮೀ. ಕಾಂಪೌಂಡ್ ಗೋಡೆ ನಿರ್ಮಿಸಲು ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಉಪಾಧ್ಯಕ್ಷ ಬಿ.ಜಿ.ಉಜ್ಜಿನಗೌಡರು ಮಾತನಾಡಿ, ಎನ್ಎಂಡಿ.ಸಿ ಸುತ್ತ ಮುತ್ತಲಿನ ಶಾಲೆಗಳಲ್ಲಿನ ಕೊರತೆಗಳ ಬಗ್ಗೆ ಕಂಪೆನಿಯವರಿಗೆ ತಿಳಿಸಿದರೆ, ಅವರು ಅಂತಹ ಕೊರತೆಗಳ ನಿವಾರಣೆಗೆ ಸಿದ್ಧರಿದ್ದಾರೆ ಎಂದು ಸಭೆಗೆ ತಿಳಿಸಿದಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉತ್ತರಿಸಿ, ಈಗಾಗಲೇ 8 ಶಾಲಾ ಕೊಠಡಿಗಳ ನಿರ್ಮಾಣ ಮಾಡಿ ಕೊಡಲು ಕಂಪೆನಿಯವರಿಗೆ ತಿಳಿಸ ಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸುಭಾನ್ ಸಾಬ್, ತಾ.ಪಂ.ಇಓ ಸಣ್ಣ ವೀರಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.