ಹೊಸಪೇಟೆ: ಹಂಪಿಯಲ್ಲಿ ಹೆಚ್ಚು ಹೆಚ್ಚು ನಾಗರಿಕ ಸೌಲಭ್ಯಗಳನ್ನು ನೀಡಬೇಕು ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಬೇಕು ಎಂಬ ಹೇಳಿಕೆ ನೀಡುವ ಸರ್ಕಾರ ತಿಳಿದು ತಿಳಿಯದೇ ಒಂದೊಂದೇ ಸೇವೆಗಳನ್ನು ಹಂಪಿಯಿಂದ ಮಾಯ ಮಾಡುತ್ತಿದೆ. ಇಂತಹ ಮಾಯವಾಗುತ್ತಿರುವ ಸೇವೆಗಳ ಸಾಲಿಗೆ ಸೇರಿಕೊಂಡಿದೆ ಅಂಚೆ ಸೇವೆ.
ಹಂಪಿ ಐತಿಹಾಸಿಕ ಅಂತರರಾಷ್ಟ್ರೀಯ ಪ್ರವಾಸಿತಾಣವಾಗಿದ್ದರು ಸರ್ಕಾರ ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿ ಗರಿಗೆ ಮೂಲ ಸೌಕರ್ಯಗಳನ್ನು ನೀಡುತ್ತಿಲ್ಲ, ಖಾಸಗಿ ಸೌಕರ್ಯಗಳು ಇಲ್ಲ, ಸರ್ಕಾರಿ ಸೌಕರ್ಯಗಳು ಇಲ್ಲದೆ ಪ್ರವಾಸಿಗರ ಬವಣೆ ಮಾತ್ರ ಮುಂದುವರಿದಿದೆ.
ಹಂಪಿಯಲ್ಲಿ ಇತ್ತೀಚೆಗೆ ನಡೆದ ತೆರವು ಕಾರ್ಯಾಚರಣೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಾಹಿತಿ ಕೇಂದ್ರವನ್ನು ತೆಗೆದು ಹಾಕ ಲಾಗಿದೆ. ಅಂಚೆ ಸೇವೆ ಸಹ ಈಗ ಸದ್ದು ಗದ್ದಲವಿಲ್ಲದೆ ಮಾಯವಾಗಿರುವುದು ಪ್ರವಾಸಿಗರ ಪಾಲಿಗೆ ನುಂಗಲಾರದ ತುತ್ತಾಗಿದೆ.
ಸುಮಾರು 60 ವರ್ಷಗಳಲ್ಲಿ ಹಂತ ಹಂತವಾಗಿ ಬೆಳೆದು ಶಾಖಾ ಕಚೇರಿಯಿಂದ ಸ್ವತಂತ್ರ ನಿರ್ವಹಣೆಯ ಉಪ ಅಂಚೆ ಕಚೇರಿಯಾಗಿ ಸೇವೆ ಒದಗಿಸುತ್ತಿದ್ದ ಇಲ್ಲಿನ ಅಂಚೆ ಇಲಾಖೆ ಕಚೇರಿಯಲ್ಲಿ ಮಾಸಿಕ ಲಕ್ಷಾಂತರ ಮುಖಬೆಲೆಯ ಸ್ಟಾಂಪ್ ಮಾರಾಟ ಮಾಡುತ್ತಿದ್ದುದು ದಾಖಲೆಯಾಗಿತ್ತು.
ರಾಜಧಾನಿ, ಮಹಾನಗರಪಾಲಿಕೆ, ಜಿಲ್ಲಾ ಕೇಂದ್ರಗಳಿಗೆ ಸಮನಾಗಿ ಗಣಕೀಕರಣ, ಇಂಟರ್‌ನೆಟ್‌ನಂಥ ಆಧುನಿಕ ಸೇವೆಗಳನ್ನು ನೀಡುತ್ತಿದ್ದ ಕಚೇರಿ ಇಲ್ಲಿನ ಶಾಖೆ ಹೆಚ್ಚಿನ ಸಂಖ್ಯೆ ಯಲ್ಲಿ ವಿದೇಶಿ ಪಾರ್ಸಲ್‌ಗಳನ್ನು ರವಾನಿಸುತ್ತಿತ್ತು.
ಹಂಪಿಯಲ್ಲಿ ಇತ್ತೀಚೆಗೆ ನಡೆದ ತೆರವು ಕಾರ್ಯಾಚರಣೆಯಲ್ಲಿ ಅಂಚೆ ಕಚೇರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಕೇಂದ್ರ, ಎಟಿಎಂ ಸೇರಿದಂತೆ ಸರ್ಕಾರಿ ಸೌಲಭ್ಯಗಳ ಮಳಿಗೆ ಗಳನ್ನು ಸಹ ತೆರವುಗೊಳಿಸಲಾಗಿದೆ ಎಂಬ ಭಾವನೆ ಪ್ರವಾಸಿಗರಲ್ಲಿ ಮೂಡಿಸಿದಂತಾಗಿದೆ.
ಇದನ್ನೇ ಬಂಡವಾಳವಾಗಿಸಿಕೊಂಡ ಖಾಸಗಿ ವ್ಯಾಪಾರಸ್ಥರು ಒಂದು ರೂಪಾಯಿ ಮುಖಬೆಲೆಯ ಅಂಚೆ ಸ್ಟಾಂಪ್ ಅನ್ನು 10 ರೂಪಾಯಿಗೆ ಮಾರಿ ಪ್ರವಾಸಿಗರಿಂದ ಹಣ ದೋಚುತ್ತಿದ್ದಾರೆ ಎನ್ನಲಾಗುತ್ತಿದೆ.
ಆಗ್ರಹ: ಸರ್ಕಾರಿ ಸೇವೆಗೆ ಸರ್ಕಾರವೇ ಸ್ಥಳಾವಕಾಶ ನೀಡದಿರುವುದು ವಿಷಾದನೀಯ, ಇಂತಹ ಕಾರ್ಯಗಳು ಅವ್ಯವಹಾರಕ್ಕೆ ಅವಕಾಶ ಮಾಡಿ ಕೊಟ್ಟಂತಾಗಿದೆ.
ತಕ್ಷಣವೇ ಸಾಲು ಮಂಟಪ ಅಥವಾ ದೇವಸ್ಥಾನದ ಒಂದು ಪಾರ್ಶ್ವದಲ್ಲಾದರೂ ಸ್ಥಳಾವಕಾಶ ನೀಡಿ ಅತ್ಯಂತ ಅವಶ್ಯಕ ವಾದ ಅಂಚೆ ಸೇವೆಯನ್ನು ಸಾರ್ವ ಜನಿಕರು ಹಾಗೂ ಪ್ರವಾಸಿಗರಿಗೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳು ವಂತೆ ಸರ್ಕಾರವನ್ನು ಸ್ಥಳೀಯ ನಿವಾಸಿ ಮೋಹನ್ ಚಿಕ್ಕಭಟ್ಟ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.