ADVERTISEMENT

ಸಿಬಿಐ ದಾಳಿ: ಬೆಚ್ಚಿಬಿದ್ದಿರುವ ಗಣಿಧಣಿ...

ಸಿದ್ದಯ್ಯ ಹಿರೇಮಠ
Published 7 ಅಕ್ಟೋಬರ್ 2011, 10:10 IST
Last Updated 7 ಅಕ್ಟೋಬರ್ 2011, 10:10 IST

ಬಳ್ಳಾರಿ: ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ) ಮಾಲೀಕ, ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸರೆಡ್ಡಿ ಅವರ ಬಂಧನದ ದಿನದಿಂದ ಜಿಲ್ಲೆಯ ಗಣಿ ಮಾಲೀಕರು ಮತ್ತು ಗಣಿ ಸಂಬಂಧಿ ಉದ್ಯಮದಲ್ಲಿ ತೊಡಗಿದವರಲ್ಲಿ ಮನೆ ಮಾಡಿದ್ದ ಆತಂಕ, ಇದೀಗ ಮತ್ತಷ್ಟು ಹೆಚ್ಚಿದೆ.

ಆಂಧ್ರಪ್ರದೇಶದ ಗಣಿಗಳಲ್ಲಿ ನಡೆದ ಅಕ್ರಮವನ್ನು ಪತ್ತೆ ಮಾಡಲು ನಿಯುಕ್ತಿಗೊಂಡಿರುವ ಡಿಐಜಿ ವಿ.ವಿ. ಲಕ್ಷ್ಮಿ ನಾರಾಯಣ ನೇತೃತ್ವದ ಸಿಬಿಐ ತಂಡ, ಸೆ. 5ರ ಬೆಳಿಗ್ಗೆ ರೆಡ್ಡಿದ್ವಯರನ್ನು ಬಂಧಿಸಿ ಕರೆದೊಯ್ದ ಕೂಡಲೇ ಬೆಚ್ಚಿ ಬಿದ್ದಿದ್ದ ಜಿಲ್ಲೆಯ ಗಣಿ ವಲಯ, ಇದೀಗ ಬಳ್ಳಾರಿಯ ಗಣಿಗಳಲ್ಲೂ ನಡೆದಿರುವ ಅಕ್ರಮಗಳನ್ನು ಹೊರತೆಗೆಯುವ ನಿಟ್ಟಿನಲ್ಲಿ ಆರಂಭಿಸಲಾದ ಸಿಬಿಐನ ತನಿಖೆಯಿಂದಾಗಿ ತತ್ತರಿಸಿಹೋಗಿದೆ.

ಅಷ್ಟೇ ಅಲ್ಲ, `ಅಕ್ರಮ ಗಣಿಗಾರಿಕೆಯ ಭೂತ~ ಜಿಲ್ಲೆಯ ಅನೇಕರನ್ನು ಬೆಂಬಿಡದೆ ಕಾಡುತ್ತಿದೆ.
ಗಣಿ ಮಾಲೀಕರು, ಲಾಜಿಸ್ಟಿಕ್ಸ್ ಕಂಪೆನಿಗಳು, ಅವರ ಲೆಕ್ಕಪತ್ರ ನೋಡಿಕೊಂಡವರು, ಅಕ್ರಮ ನಡೆಸಿರುವವರಿಗೆ ಅದಿರನ್ನು ಪೂರೈಕೆ ಮಾಡಿದವರು... ಹೀಗೆ ಪ್ರತಿಯೊಬ್ಬರೂ ಸಿಬಿಐನ ವಿಚಾರಣಾ ವ್ಯಾಪ್ತಿಗೆ ಒಳಪಡುತ್ತಿದ್ದಾರೆ.

ಯಾವುದೇ ಸಂದರ್ಭ ಗಣಿಗಾರಿಕೆ ಮತ್ತು ಗಣಿ, ಅದಿರು ಸಂಬಂಧಿ ಚಟುವಟಿಕೆಯಲ್ಲಿ ತೊಡಗಿದವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿದ್ದು, ಅನೇಕರು ಊರು ಬಿಟ್ಟೇ ಹೋಗಿದ್ದಾರೆ.

ಊರು ಬಿಟ್ಟ ಗಣಿಧಣಿಗಳು: ರಾಜ್ಯದ ಗಣಿಗಳಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಸೋಮವಾರ ತನಿಖೆ ಆರಂಭಿಸಿರುವ ಸಿಬಿಐ, ಮಂಗಳವಾರವೂ ದಾಳಿ ಮುಂದುವರಿಸಿದ್ದರೂ, ಪ್ರಮುಖ ರ‌್ಯಾರೂ ಅಧಿಕಾರಿಗಳ ಕೈಗೆ ಸಿಕ್ಕಿಲ್ಲ ಎಂಬುದು ವಿಶೇಷ.

ಕೆಲವು ಕಚೇರಿಗಳಲ್ಲಿ ಸಣ್ಣಪುಟ್ಟ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಲಭ್ಯರಾದರೆ, ಮನೆಗಳಲ್ಲಂತೂ ಮಹಿಳೆಯರನ್ನು ಹೊರತುಪಡಿಸಿ ಬೇರಾರೂ ದೊರೆತಿಲ್ಲ ಎನ್ನಲಾಗಿದೆ. ಅನೇಕ ಗಣಿಧಣಿಗಳು ಸಿಬಿಐ ದಾಳಿಗೆ ಸಿಲುಕುವ ಭಯದಿಂದ ಊರನ್ನೇ ಬಿಟ್ಟು ಹೊರಟುಹೋಗಿದ್ದು, ಇಲ್ಲಿನ ಬೆಳವಣಿಗೆಗಳ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಾಲ್ಕು ದಿನ ವಿಚಾರಣೆ: ಜಿಲ್ಲೆಯ ಹೊಸಪೇಟೆಯಲ್ಲಿರುವ ಖಾರದಪುಡಿ ಮಹೇಶ, ಸ್ವಸ್ತಿಕ್ ನಾಗರಾಜ್ ಹಾಗೂ ಸಂಡೂರಿನ ಎಸ್‌ಟಿಡಿ ಮಂಜುನಾಥ ಅವರ ಮನೆಗಳ ಮೇಲೆ ಸೆ. 19ರಂದು ದಾಳಿ ನಡೆಸಿ, ನೋಟಿಸ್ ನೀಡಿದ್ದ ಸಿಬಿಐ ಅಧಿಕಾರಿಗಳು, 4 ದಿನಗಳ ನಂತರ ಹಾಜರಾದ ಸ್ವಸ್ತಿಕ್ ನಾಗರಾಜ್‌ನನ್ನು ಎರಡು ದಿನಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರಲ್ಲದೆ, ಒಂದು ವಾರದ ನಂತರ ತೆರಳಿದ್ದ ಖಾರದಪುಡಿ ಮಹೇಶನನ್ನು ಸತತ ನಾಲ್ಕು ದಿನಗಳ ಕಾಲ ತಮ್ಮಂದಿಗೇ ಇರಿಸಿಕೊಂಡು ಗಣಿ ಅಕ್ರಮದ ಕುರಿತ  ಮಾಹಿತಿಯನ್ನೂ, ರೆಡ್ಡಿದ್ವಯರೊಂದಿಗಿನ ನಂಟಿನ ಹಿನ್ನೆಲೆಯನ್ನೂ ಕೆದಕಿದ್ದರು.

ಇದೀಗ ಜಿಲ್ಲೆಯ ಗಣಿ ಅಕ್ರಮಗಳ ಕುರಿತು ತನಿಖೆಗೆ ಚಾಲನೆ ನೀಡಿದ ಎರಡೇ ದಿನಗಳಲ್ಲಿ ಒಟ್ಟು 20 ಕಡೆಗಳಲ್ಲಿ ದಾಳಿ ನಡೆಸಿರುವ ಸಿಬಿಐ ಸಿಬ್ಬಂದಿ, ಎತ್ತಣದಿಂದೆತ್ತಣ ಸಂಬಂಧ ವಿದೆ? ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ.

ತಿಂಗಳು ಕಳೆಯಿತು: ಗಾಲಿ ಜನಾರ್ದನರೆಡ್ಡಿ ಹಾಗೂ ಬಿ.ವಿ. ಶ್ರೀನಿವಾಸರೆಡ್ಡಿ ಅವರು ಬಂಧನಕ್ಕೆ ಒಳಗಾಗಿ ಬುಧವಾರಕ್ಕೆ (ಅ. 5) ಒಂದು ತಿಂಗಳು ಪೂರ್ಣಗೊಳ್ಳಲಿದೆ.

ಏತನ್ಮಧ್ಯೆ, ರೆಡ್ಡಿ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಗೆ ಸಂಬಂಧಿಸಿದ ಅಕ್ರಮಗಳ ತನಿಖೆಯನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿದ್ದು, ಕಳೆದ ಐದಾರು ವರ್ಷಗಳ ಅವಧಿಯಲ್ಲಿ ನಡೆದಿರುವ ಗಣಿ ಅಕ್ರಮ ಗಳಲ್ಲಿ ಭಾಗಿಯಾಗಿರುವ ಇತರ ಗಣಿಗಳ ಮಾಲೀಕರು, ಕೈಗಾರಿಕೆ ಗಳೂ, ಟ್ರಾನ್ಸ್‌ಪೋರ್ಟ್ಸ್ ಏಜೆನ್ಸಿಯವರು ವಿಚಾರಣೆ ಎದುರಿಸುವುದು ಅನಿವಾರ್ಯವಾಗಿದೆ.

ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿರುವ ಲೋಕಾಯುಕ್ತರು ಸಲ್ಲಿಸಿರುವ ವರದಿಯ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಕೆಲಸ ಮಾಡಿ ವರ್ಗವಾಗಿ ಹೋಗಿರುವ, ಕೆಲಸ ಮಾಡುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧವೂ ಶಿಸ್ತು ಕ್ರಮದ ಛಾಟಿ ಏಟು ಶುರುವಾಗಿದ್ದು, ಅಕ್ರಮವನ್ನು ವಿರೋಧಿಸುತ್ತಲೇ ಬಂದಿರು ವವರು ನಿಟ್ಟುಸಿರು ಬಿಡುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.