ADVERTISEMENT

‘ಸೈನಿಕ ಹುಳ: ತುರ್ತು, ಸಾಮೂಹಿಕ ಕ್ರಮ ಅಗತ್ಯ’

ತಂಪಾದ ಹವೆಯಲ್ಲಿ ಬೆಳೆಗಳಲ್ಲಿ ಬಾಧೆ ಉಲ್ಬಣ, ಪ್ರತಿ ಗಿಡದಲ್ಲಿ 15ರಿಂದ 20 ಹುಳುಗಳು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 5:47 IST
Last Updated 5 ಅಕ್ಟೋಬರ್ 2017, 5:47 IST

ಬಳ್ಳಾರಿ: ‘ಜಿಲ್ಲೆಯಲ್ಲಿ ಹಲವು ಬೆಳೆಗಳಿಗೆ ಸೈನಿಕ ಹುಳುವಿನ ಬಾಧೆ ತಲೆದೋರಿದ್ದು, ರೈತರು ತುರ್ತಾಗಿ ಸಾಮೂಹಿಕ ನೆಲೆಯಲ್ಲಿ ಕ್ರಮ ಕೈಗೊಂಡರೆ ಹತೋಟಿ ಸಾಧಿಸಬಹುದು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌ ಸಲಹೆ ನೀಡಿದ್ದಾರೆ.

‘ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಿಗೆ ಹುಳುವಿನ ಬಾಧೆ ಕಂಡುಬಂದಿದ್ದು, ಸಾವಿರಾರು ಪತಂಗಗಳು ನೂರಾರು ಕಿಲೋ ಮೀಟರ್ ದೂರದಿಂದ ಆಹಾರ ಹುಡುಕುತ್ತಾ, ಹೊಲಗಳಲ್ಲಿ ಭೂ ಸ್ಪರ್ಶ ಮಾಡಿ ಮೊಟ್ಟೆಗಳನ್ನು ಇಡುತ್ತವೆ. ತೇವಾಂಶ ಹೆಚ್ಚಿರುವ ಕಡೆ ಅವುಗಳ ಹಾವಳಿ ಹೆಚ್ಚು.

ಪ್ರತಿ ಗಿಡದಲ್ಲಿ 15ರಿಂದ 20 ಹುಳುಗಳು ಹಗಲಿನಲ್ಲಿ ಗರಿಗಳ ಬುಡದಲ್ಲಿ ಅಡಗಿದ್ದು, ರಾತ್ರಿಯಲ್ಲಿ ಬೆಳೆ ತಿಂದು ನಾಶಪಡಿಸುತ್ತವೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ADVERTISEMENT

ದೀಪದ ಬಲೆ ಅಳವಡಿಸಿ: ‘ಹೊಲದ ಸುತ್ತಮುತ್ತ ಬದುವಿನ ಮೇಲಿನ ಕಳೆ ಹಾಗೂ ಸಸ್ಯಗಳನ್ನು ಸಂಪೂರ್ಣವಾಗಿ ನಾಶ ಪಡಿಸಬೇಕು.

ರೈತರು ಹೊಲಗಳಲ್ಲಿ ಸಾಮೂಹಿಕವಾಗಿ ಸಂಜೆ 7 ರಿಂದ ರಾತ್ರಿ 9ರವರೆಗೆ ದೀಪದ ಬಲೆಯನ್ನು ಇಟ್ಟು ಪತಂಗಗಳನ್ನು ಆಕರ್ಷಿಸಿ ನಾಶ ಪಡಿಸಬೇಕು’ ಎಂದು ಸಲಹೆ ನೀಡಿದ್ದಾರೆ.

‘ಮರಿಹುಳುಗಳು ಒಂದು ಅಥವಾ ಎರಡನೇ ಹಂತದಲ್ಲಿರುವಾಗ ಹತೋಟಿಗಾಗಿ ಕ್ಲೋರೋಫೆರಿಫಾಸ್ 20 ಇ.ಸಿ. 2 ಮಿ.ಲೀ. ಅಥವಾ ಕ್ವಿನಾಲ್‍ಫಾಸ್ 25 ಇ.ಸಿ. 2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು’ ಎಂದು ತಿಳಿಸಿದ್ದಾರೆ.

ಪಾಷಾಣ: ‘ಕೀಟನಾಶಕದಿಂದ ಹುಳುಗಳ ನಿಯಂತ್ರಣ ಕಷ್ಟವಾದರೆ ಪಾಷಾಣ ಬಳಸಬಹುದು. ಅದಕ್ಕೆ ಪ್ರತಿ ಹೆಕ್ಟೇರ್‌ಗೆ 50 ಕೆಜಿ ಬತ್ತದ ತೌಡು ಅಥವಾ ಗೋಧಿ ತೌಡು, 5 ಕೆಜಿ ಬೆಲ್ಲ, 625 ಮಿ.ಲೀ ಮೋನೋಕ್ರೋಟೋಪಾಸ್ (ಶೇ.36ಎಸ್‍ಎಲ್) ಬೇಕಾ ಗುತ್ತದೆ’ ಎಂದಿದ್ದಾರೆ,

‘ಬೆಲ್ಲವನ್ನು ನೀರಿನಲ್ಲಿ ಕರಗಿಸಿ, ನಂತರ ಮೋನೋಕ್ರೋಟೋಫಾಸ್ ಮತ್ತು ತೌಡನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ರಾತ್ರಿಯಿಡೀ ಗಾಳಿಯಾಡದಂತೆ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮುಚ್ಚಿಡಬೇಕು. ನಂತರ ಸಂಜೆ ವೇಳೆ ಕೈಗವಸು ಧರಿಸಿ ಬೆಳೆಗಳಿಗೆ ಎರಚಬೇಕು. ಎರಡು ಸಾಲಿಗೊಂದರಂತೆ ಎರಡು ಮೀಟರ್ ಅಂತರದಲ್ಲಿ ಒಂದೊಂದು ಹಿಡಿ ಪಾಷಾಣವನ್ನು ಬೆಳೆಗಳಲ್ಲಿ ಇಟ್ಟು ಕೂಡ ಹುಳುಗಳನ್ನು ಆಕರ್ಷಿಸಬಹುದು’ ಎಂದಿದ್ದಾರೆ.

‘ಬೆಳೆಗಳ ಎತ್ತರ ಕಡಿಮೆಯಿದ್ದಲ್ಲಿ ಮೆಲಾಥಿಯಾನ್ ಶೇ.5ರಷ್ಟು ಡಸ್ಟ್ ಅನ್ನು ಪ್ರತಿ ಹೆಕ್ಟೇರ್‌ಗೆ 25 ಕೆ ಜಿ ಯಂತೆ ಹರಡಬೇಕು. ಅಥವಾ ಪ್ರತಿ ಲೀಟರ್ ನೀರಿನಲ್ಲಿ ಫೆನ್ವಲ್‍ರೇಟ್ 1 ಗ್ರಾಂ ಅಥವಾ ಲ್ಯಾಮ್ಡ್ ಸೈಲೋತ್ರಿನ್ 1 ಮಿ.ಲೀ ಅನ್ನು ಬೆರೆಸಿ ಸಿಂಪಡಿಸಬೇಕು’ ಎಂದಿದ್ದಾರೆ.

‘ಹೊಲದ ಸುತ್ತ ಒಂದು ಅಡಿ ಆಳ ಹಾಗೂ 1 ಅಥವಾ 2 ಅಡಿ ಅಗಲದ ಕಂದಕವನ್ನು ತೋಡಿ ಅದರ ಮೇಲೆ ವಿಷ ಪಾಷಾಣವನ್ನು ಎರಚಿ ಅಥವಾ ಮೆಲಾಥಿಯನ್ ಶೇ 5ರಷ್ಟು ಡಸ್ಟ್ 8 ರಿಂದ 10 ಕಿ.ಗ್ರಾಂ ಎರಚುವುದರಿಂದ ಕೀಟಗಳು ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಹೋಗುವುದನ್ನು ತಪ್ಪಿಸಬಹುದು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.