ADVERTISEMENT

ಸೈನಿಕ ಹುಳುಬಾಧೆ : ರೈತರಿಗೆ ಪರಿಹಾರ ನೀಡಲು ಎಚ್.ಡಿ.ದೇವೇಗೌಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 5:30 IST
Last Updated 25 ಅಕ್ಟೋಬರ್ 2017, 5:30 IST
ಹೂವಿನಹಡಗಲಿ ತಾಲ್ಲೂಕು ಕೊಯಿಲಾರಗಟ್ಟಿ ತಾಂಡಾ ಬಳಿ ಸೈನಿಕಹುಳು ಬಾಧೆಯಿಂದ ಹಾನಿಗೀಡಾದ ಮೆಕ್ಕೆಜೋಳ ಬೆಳೆಯನ್ನು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಪರಿಶೀಲಿಸಿದರು.
ಹೂವಿನಹಡಗಲಿ ತಾಲ್ಲೂಕು ಕೊಯಿಲಾರಗಟ್ಟಿ ತಾಂಡಾ ಬಳಿ ಸೈನಿಕಹುಳು ಬಾಧೆಯಿಂದ ಹಾನಿಗೀಡಾದ ಮೆಕ್ಕೆಜೋಳ ಬೆಳೆಯನ್ನು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಪರಿಶೀಲಿಸಿದರು.   

ಹೂವಿನಹಡಗಲಿ: 'ಸೈನಿಕ ಹುಳು ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಗರಿಷ್ಠ ಪರಿಹಾರ ನೀಡಬೇಕು' ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,'ತಾವು ಈಗಾಗಲೇ 40 ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ, ಸೈನಿಕಹುಳು ಬಾಧಿತ ಪ್ರದೇಶಗಳನ್ನು ಪರಿಶೀಲನೆ ನಡೆಸಿದ್ದೇನೆ.

2.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅದೇ ರೀತಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ತೆಂಗು, ಅಡಿಕೆ ಬೆಳೆಗಾರರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳು ಕೂಡಲೇ ಪರಿಹಾರ ಮಾರ್ಗೋಪಾಯ ಕಂಡುಹಿಡಿದು ರೈತರ ನೆರವಿಗೆ ಧಾವಿಸಬೇಕು. ತಾತ್ಸರ ಮಾಡಿದರೆ ಸಂಸತ್ತಿನಲ್ಲಿ ಹೋರಾಟ ಮಾಡುವ ಜತೆಗೆ ರೈತರೊಂದಿಗೆ ದೊಡ್ಡ ಆಂದೋಲನ ನಡೆಸಬೇಕಾಗುತ್ತದೆ' ಎಂದು ಎಚ್ಚರಿಸಿದರು.

ADVERTISEMENT

‘ರೈತರ ಸಮಸ್ಯೆಗಳು ಸೇರಿದಂತೆ ರಾಜ್ಯದ ಜಟಿಲ ಸಮಸ್ಯೆಗಳ ಕುರಿತು ಸಂಸತ್ ಅಧಿವೇಶನದಲ್ಲಿ ಮಾತನಾಡಲು ತಮಗೆ ಅವಕಾಶ ನೀಡುತ್ತಿಲ್ಲ. ಸಂಖ್ಯಾಬಲ ಎಂಬ ಹೊಸ ನಿಯಮ ಜಾರಿಗೆ ತಂದು ಸಂಸತ್‌ನಲ್ಲಿ ನಮ್ಮಂಥವರು ಮಾತನಾಡದಂತೆ ಕಟ್ಟಿಹಾಕಲಾಗಿದೆ’ ಎಂದು ಆರೋಪಿಸಿದರು.

ನಂತರ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಾಲ್ಲೂಕಿನ ಕೊಯಿಲಾರಗಟ್ಟಿ ತಾಂಡಾದ ರೈತ ಲಚ್ಯಾನಾಯ್ಕ ಅವರ ಹೊಲಕ್ಕೆ ಭೇಟಿ ನೀಡಿ ಸೈನಿಕಹುಳು ಬಾಧೆಯಿಂದ ಹಾನಿಗೀಡಾದ ಮೆಕ್ಕೆಜೋಳ ಬೆಳೆಯನ್ನು ವೀಕ್ಷಿಸಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ನಾಗರಾಜ, ಮುಖಂಡ ಸೋಮಪ್ಪನಾಯ್ಕ ಎನ್.ಲಮಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.