ADVERTISEMENT

ಸೋರುತ್ತಿರುವ ತಾಲ್ಲೂಕು ಕಚೇರಿ: ಪರದಾಟ

ಕೂಡ್ಲಿಗಿ: ಮಿನಿ ವಿಧಾನಸೌಧ ಇನ್ನೂ ಕನಸು: ದಾಖಲೆ ಹಾಳಾಗುವ ಭೀತಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2016, 10:19 IST
Last Updated 1 ಆಗಸ್ಟ್ 2016, 10:19 IST
ಕೂಡ್ಲಿಗಿ ಪಟ್ಟಣದಲ್ಲಿರುವ ತಾಲ್ಲೂಕು ಕಚೇರಿಯ ಭೂಮಾಪನ ವಿಭಾಗದ ಕಟ್ಟಡದಲ್ಲಿ ಮಳೆ ನೀರು ಸೋರಿಕೆಯಿಂದ ರಕ್ಷಿಸಿಕೊಳ್ಳಲು ಚಾವಣಿ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಿರುವುದು
ಕೂಡ್ಲಿಗಿ ಪಟ್ಟಣದಲ್ಲಿರುವ ತಾಲ್ಲೂಕು ಕಚೇರಿಯ ಭೂಮಾಪನ ವಿಭಾಗದ ಕಟ್ಟಡದಲ್ಲಿ ಮಳೆ ನೀರು ಸೋರಿಕೆಯಿಂದ ರಕ್ಷಿಸಿಕೊಳ್ಳಲು ಚಾವಣಿ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಿರುವುದು   

ಕೂಡ್ಲಿಗಿ: ಪಟ್ಟಣದಲ್ಲಿರುವ ಶತಮಾನ ದಷ್ಟು ಹಳೆಯದಾದ ತಾಲ್ಲೂಕು ಕಚೇರಿ ಕಟ್ಟಡ ಮಳೆಗೆ ಸಂಪೂರ್ಣವಾಗಿ ಸೋರ ತೊಡಗಿದ್ದು, ಮಳೆಯ ಸೋರಿಕೆಯಿಂದ ಪಾರಾಗುವುದೇ ಇಲ್ಲಿನ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 1916ರಲ್ಲಿ  ಮಂಗಳೂರು ಹೆಂಚು ಗಳಿಂದ ನಿರ್ಮಾಣ ಮಾಡಲಾಗಿದೆ. ಕೆಲವಡೆ ಹೆಂಚುಗಳು ಹೊಡೆದಿದ್ದು ಮಳೆ ಬಂದರೆ ಅಗತ್ಯ ದಾಖಲೆಗಳು, ಕಂಪ್ಯೂಟರ್‌ಗಳು, ವಿದ್ಯುತ್ ಉಪಕರಣ ಗಳು ಮಳೆ ನೀರಿನಿಂದ ತೋಯ್ದು ಅಪಾರ ಹಾನಿಯಾಗುತ್ತಿದೆ.

ತಾಲ್ಲೂಕು ಕಚೇರಿಯ ಒಂದು ಬದಿಯಲ್ಲಿ  ಭೂ ಮಾಪನ ಕೇಂದ್ರವಿದ್ದು, ಅದು ಸಂಪೂರ್ಣ ಕುಸಿಯುವ ಹಂತ ದಲ್ಲಿದೆ. ಇದರಲ್ಲಿಯೇ ಅತ್ಯಮುಲ್ಯವಾದ ಭೂದಾಖಲೆಗಳನ್ನು ಇಟ್ಟಿದ್ದು, ಮಳೆಯ ನೀರಿನಿಂದ ರಕ್ಷಿಸಲು ಸಿಬ್ಬಂದಿ ಹರ ಸಹಾಸ ಮಾಡಬೇಕಾಗಿದೆ. ಇವುಗಳನ್ನು ರಕ್ಷಿಸಲು ಮಾಳಿಗೆ ಮೇಲೆ ಮತ್ತು ದಾಖಲೆಗಳನ್ನು ಇಟ್ಟಿರುವ ಕಪಾಟುಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಚಾವಣಿ ಮೇಲೆ ಮರ ಗಿಡಗಳು ಬೆಳೆದಿದ್ದು, ಬೇರುಗಳು ಕೆಳಗಡೆ ಇಳಿ ಬಿದ್ದಿವೆ. ಇದರಿಂದ ಕಟ್ಟಡದ ಒಂದು ಭಾಗದ ಆರ್‌ಸಿಸಿ ಚಾವಣಿ ಕುಸಿಯುವ ಭಯದಲ್ಲಿ ಹಾಗೂ ಮಳೆ ನೀರಿನಿಂದ ರಕ್ಷಸಿಕೊಳ್ಳಲು ಇಲ್ಲಿನ ಸಿಬ್ಬಂದಿ ಹಳೆ ಜೈಲ್ ಅವರಣ ದಲ್ಲಿ ಕುಳಿತು ಕಾರ್ಯ ನಿರ್ವಹಿಸ ಬೇಕಾದ ಅನಿರ್ವಾತೆ ಇದೆ.

ಇತ್ತ ತಾಲ್ಲೂಕು ಕಚೇರಿ ಹಳೆ ಕಟ್ಟಡದ ಹಿಂಭಾಗದಲ್ಲಿ ಇತ್ತೀಚೆಗೆ ನಿರ್ಮಾಣ ಮಾಡಿರುವ ಕೊಠಡಿಯೂ ಸೋರುತ್ತಿದ್ದು, ಇದರಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಿಬ್ಬಂದಿಯೂ ಪರದಾಡುವಂತಾಗಿದೆ. ಮಳೆ ಬಂದರೆ ಕಂಪ್ಯೂಟರ್, ಮುದ್ರಣ ಯಂತ್ರಗಳನ್ನು ರಕ್ಷಿಸಿಕೊಳ್ಳುವುದೇ ಸವಾಲಾಗಿ ಪರಿಣಿಮಿಸುತ್ತದೆ. ಇದಕ್ಕೂ ಚಾವಣಿ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ.

ಇದರ ಮುಂದಿರುವ ಪಡಸಾಲೆಗೆ ಬರುವ ನಾಗರಿಕರಿಗೆ ನೆರಳು ನೀಡಲು ತಗಡಿನ ಚಾವಣಿ ಹಾಕಲಾಗಿದ್ದು, ಇದರ ಆಧಾರಕ್ಕೆ ಇರುವ ಕಂಬಗಳಲ್ಲಿ ಮಳೆ ಬಂದಾಗ ಕೆಲವೊಮ್ಮೆ ವಿದ್ಯುತ್ ಹರಿಯುತ್ತಿದ್ದು, ನಾಗರಿಕರು ಆತಂಕಪಡುವಂತಾಗಿದೆ.

ಕನಸಾಗಿ ಉಳಿದ ಮಿನಿ ವಿಧಾನ ಸೌಧ: ಕಳೆದ ಎಂಟತ್ತು ವರ್ಷಗಳಿಂದ ಈಗಿರುವ ತಾಲ್ಲೂಕು ಕಚೇರಿ ಕಟ್ಟಡ ವನ್ನು ಕೆಡವಿ ನೂತನವಾಗಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲಾಗುವುದು ಎಂದು ಹೇಳುತ್ತಲೆ ಬರಲಾಗುತ್ತದೆ. ಆದರೆ ಇದುವರೆಗೂ ನಿರ್ಮಾಣ ಮಾಡುವ ಯಾವ ಸುಳಿವು ಇಲ್ಲದಂತಾಗಿದೆ. ಇದರಿಂದಾಗಿ ತಾಲ್ಲೂಕಿನ ಜನತೆಗೆ ಮಿನಿ ವಿಧಾನ ಸೌಧ ಕನಸಾಗಿಯೇ ಉಳಿದಿದೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಲಿ ಎಂಬುದು ತಾಲ್ಲೂಕಿನ ಜನತೆಯ ಆಸಯವಾಗಿದೆ.

ಸಂಡೂರು ರಸ್ತೆಯಲ್ಲಿರುವ ರೇಷ್ಮೆ ಇಲಾಖೆಯ ಕಟ್ಟಡಕ್ಕೆ ಕಚೇರಿ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದ್ದು, ರೇಷ್ಮೆ ಇಲಾಖೆ ಕಟ್ಟಡದಲ್ಲಿ ತಾಲ್ಲೂಕು ಕಚೇರಿ ಸಿಬ್ಬಂದಿಗೆ ಕುಳಿತುಕೊಳ್ಳಲು ಮತ್ತು ಕಡತಗಳನ್ನು ಇಡಲು ವ್ಯವಸ್ಥೆ ಮಾಡಲು ₹ 19.5 ಲಕ್ಷ ಮತ್ತು ಕಚೇರಿ ಪೀಠೋಪಕರಣಗಳ ಸಾಗಟಕ್ಕೆ ₹3  ಲಕ್ಷ ಅಂದಾಜು ವೆಚ್ಚದ ಯೋಜನೆ ರೂಪಿಸಿ ಕಳಿಸಲಾಗಿದೆ. ಆದರೆ ಇನ್ನೂ  ಅನುಮೋದನೆ ಸಿಕ್ಕಿಲ್ಲ ಎನ್ನುತ್ತಾರೆ ತಹಶೀಲ್ದಾದಾರ್ ಎಲ್. ಕೃಷ್ಣಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.