ADVERTISEMENT

ಹಂದಿಗಳಿಂದ ಆರೋಗ್ಯ ಕೇಂದ್ರ ರಕ್ಷಿಸಿ!

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 8:30 IST
Last Updated 13 ಮಾರ್ಚ್ 2012, 8:30 IST

ಕೊಟ್ಟೂರು: ಜನತೆಯ ಆರೋಗ್ಯ ಕಾಪಾಡುವ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವೇ ದಿನ ದಿನೇ ರೋಗ ಹರಡುವ ಕೇಂದ್ರವಾಗತೊಡಗಿದೆ. ಕಾರಣವಿಷ್ಟೇ, ಇಲ್ಲಿನ ಆಸ್ಪತ್ರೆಗೆ ಕಾಲಿಡುತ್ತಿದ್ದಂತೆಯೇ ರೋಗಗಳನ್ನು ಹರಡುವ ಹಂದಿಗಳು ನಿಮ್ಮನ್ನು ಸ್ವಾಗತಿಸುತ್ತವೆ.

ಹಾಗಂತ ಆಸ್ಪತ್ರೆ ಸಿಬ್ಬಂದಿ ಹಂದಿಗಳನ್ನೇನು ಸಾಕಿಲ್ಲ. ಜರ್ಮನ್ ದೇಶದ ಅನುದಾನದಲ್ಲಿ ಎಲ್ಲಾ ಸೌಲಭ್ಯಗಳನ್ನು ಈ ಆಸ್ಪತ್ರೆ ಮಡಿಲಲ್ಲಿಟ್ಟುಕೊಂಡಿದೆ.ಸಿಬ್ಬಂದಿಯ ಕೊರತೆಯ ನಡುವೆಯೂ ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಜನತೆಯ ಆರೋಗ್ಯವನ್ನು ಕಾಪಾಡುವಲ್ಲಿ ಟೊಂಕಕಟ್ಟಿ ಸೇವೆ ಸಲ್ಲಿಸುತ್ತಿದ್ದಾರೆ.

ಆದರೆ ಅಲ್ಲಲ್ಲಿ ಆಸ್ಪತ್ರೆ ಕಾಂಪೌಂಡ್ ಬಿದ್ದು ಹೋಗಿರುವುದರಿಂದ ಹಂದಿಗಳು ಕುರಿಹಿಂಡಿನಂತೆ ಓಡಾಡುತ್ತವೆ. ಹಂದಿಗಳು ಇಲ್ಲಿನ ಸಿಬ್ಬಂದಿ ಮಕ್ಕಳ ಮೇಲೆ ಎರಗಿ ಕಚ್ಚಿದ ಪ್ರಸಂಗಗಳು ಇವೆ.ಆಸ್ಪತ್ರೆ ಸಿಬ್ಬಂದಿಯ ವಸತಿಗಳ ಗೃಹಗಳ ಎರಡು ಮನೆಯನ್ನು ಹಂದಿಗಳು ಸಂಪೂರ್ಣ ಬಾಡಿಗೆ! ತೆಗೆದುಕೊಂಡಿವೆ.

ನೀವು ಯಾವ ಸಂದರ್ಭದಲ್ಲಿ ಅಲ್ಲಿಗೆ ಹೋದರೂ 25 ಹಂದಿಗಳು ತಮ್ಮ ಸಂಸಾರದೊಂದಿಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು.ಹಂದಿಗಳು ಮನೆ ಮಾಡಿಕೊಂಡಿರುವ ಅಕ್ಕಪಕ್ಕದಲ್ಲಿಯೇ ಆಸ್ಪತ್ರೆ ಸಿಬ್ಬಂದಿ ವಾಸವಾಗಿದ್ದಾರೆ. ಈ ಸ್ಥಳ ಯಾವುದೇ ಕೊಳಚೆ ಪ್ರದೇಶಕ್ಕಿಂತಲೂ ಕಮ್ಮಿಇಲ್ಲ.

 ನಮ್ಮ ಮಕ್ಕಳಿಗೆ ಹಂದಿಗಳು ಕಚ್ಚಿವೆ. ಡೆಂಗ್ಯೂ ಜ್ವರ ಬಂದಿವೆ. ನಮ್ಮ ಕಷ್ಟನಾ ಯಾರಿಗೆ ಹೇಳಬೇಕೊ ಆರ್ಥವಾಗುತ್ತಿಲ್ಲ ಎಂದು ಸಿಬ್ಬಂದಿ ತಮ್ಮ ಅಳನ್ನು ಪತ್ರಿಕೆಯೊಂದಿಗೆ ತೊಡಿಕೊಳ್ಳುತ್ತಾರೆ.
ಹಂದಿಗಳ ಹಾವಳಿ ಉಪಟಳದಿಂದ ನಮ್ಮನ್ನು ನಮ್ಮ ಮಕ್ಕಳನ್ನು ಹಾಗೂ ಕ್ವಾರ್ಟರ್ಸ್ ರಕ್ಷಿಸಿ ಎಂದು  ಪಟ್ಟಣ ಪಂಚಾಯಿತಿಯವರಿಗೆ  ನಮ್ಮ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ  ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ನೋವಿನಿಂದಲೇ ಹೇಳುತ್ತಾರೆ.

ಕಾಂಪೌಂಡ್ ಬಿದ್ದು ಹಲವು ವರ್ಷಗಳೇ ಆಗಿವೆ. ಇದನ್ನು ನಿರ್ಮಿಸಿ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಚನ್ನಬಸವನಗೌಡ ಹಾಗೂ ಶಾಸಕ ನೇಮಿರಾಜ್ ನಾಯ್ಕ ಮತ್ತು ಡಿಎಚ್‌ಓ ಅವರಿಗೆ ಹಲವಾರು ಬಾರಿ ಪತ್ರ ಬರೆದಿದ್ದೇವೆ.

 ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎನ್ನುತ್ತಾರೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅರುಣ ಕುಮಾರ್.
ಆಸ್ಪತ್ರೆಯ ವಾತಾವರಣವೇ ರೋಗ ಪೀಡಿತವಾಗಿದೆ. ಇದನ್ನು ಸರಿಪಡಿಸದ ಸರ್ಕಾರ ಜನತೆ ಆರೋಗ್ಯವನ್ನು ಎಷ್ಟರ ಮಟ್ಟಿಗೆ ರಕ್ಷಿಸಬಲ್ಲದು ಎಂದು ಖಾರವಾಗಿ ಹೇಳುತ್ತಾರೆ  ಆಸ್ಪತ್ರೆಗೆ ದಾಖಲಾದ ಕೊಟ್ರೇಶ್.
ಇಲ್ಲಿನ ಕಲುಷಿತ ವಾತಾವರಣ ಕುರಿತು ಮೇಲಾಧಿಕಾರಿಗಳಿಗೆ ಅನೇಕ ಬಾರಿ ಪತ್ರ ಬರೆದಿದ್ದೇವೆ.
 
ಇನ್ನು ಎಚ್ಚೆತ್ತಕೊಂಡಿಲ್ಲ. ಇನ್ನು ಮುಷ್ಕರ ಮಾಡುವುದೊಂದೇ ಪರಿಹಾರ ಎಂದು ಸಮಾಜ ಸೇವಕ ಕಡ್ಲಿ ಕಲ್ಮಿನಿ ವೀರಪ್ಪ ಹೇಳುತ್ತಾರೆ.ಜಿಲ್ಲಾ ಪಂಚಾಯಿತಿ ತಕ್ಷಣವೇ ಆಸ್ಪತ್ರೆ ಕಾಂಪೌಂಡ್ ನಿರ್ಮಿಸಬೇಕಾಗಿದೆ. ಸ್ಥಳೀಯ ಪಟ್ಟಣ ಪಂಚಾಯ್ತಿ ಹಂದಿಗಳನ್ನು ಪಟ್ಟಣದಿಂದಲೇ ಹೊರಹಾಕಬೇಕು. ಇಲ್ಲವಾದರೆ ಇಡೀ ಪಟ್ಟಣವೇ ರೋಗ ಪೀಡಿತವಾಗುವುದರಲ್ಲಿ ಅನುಮಾನವಿಲ್ಲ.

ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ. ಜಿಲ್ಲಾ ಆರೋಗ್ಯ ಇಲಾಖೆ ತಕ್ಷಣ ಇಲ್ಲಿನ ಆಸ್ಪತ್ರೆ ಬಗ್ಗೆ ಗಮನ ಹರಿಸದಿದ್ದರೆ ಸಾರ್ವಜನಿಕರು ಬೀದಿಗಿಳಿದು ಹೋರಾಟ ಮಾಡುವುದರಲ್ಲಿ ಸಂಶಯವಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.