ADVERTISEMENT

ಹಂಪಿ: ಇಂದಿನಿಂದ ಮತ್ತೆ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 10:10 IST
Last Updated 7 ಸೆಪ್ಟೆಂಬರ್ 2011, 10:10 IST

ಹೊಸಪೇಟೆ: ಐತಿಹಾಸಿಕ ಹಂಪಿಯ ರಥಬೀದಿಯ ನಂತರ ಇದೀಗ ವಿರೂಪಾಕ್ಷೇಶ್ವರ ದೇವಾಲಯದ ಸುತ್ತಲೂ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳನ್ನು ಸಮೀಕ್ಷೆ ಮಾಡುವ ಕಾರ್ಯವನ್ನು ಭಾರತೀಯ ಸರ್ವೇಕ್ಷಣಾ ಇಲಾಖೆ ಬುಧವಾರದಿಂದ ಆರಂಭಿಸಲಿದೆ.

ಹೈಕೋರ್ಟ್ ನಿರ್ದೇಶನದಂತೆ ಹಂಪಿಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಕಟ್ಟಡಗಳ ಸರ್ವೇ ಕಾರ್ಯಾಚರಣೆಗೆ ಸಿದ್ದಗೊಳ್ಳುತ್ತಿದ್ದ ಭಾರತೀಯ ಸರ್ವೇಕ್ಷಣಾ ಇಲಾಖಾ ಅಧಿಕಾರಿಗಳಿಗೆ ಸ್ಥಳೀಯರು ಅಡ್ಡಿ ಪಡಿಸುತ್ತಿದ್ದು, ಸರ್ವೇ ಕಾರ್ಯ ಸಾಧ್ಯ ಆಗುತ್ತಿಲ್ಲ ಎಂದು ನಿರ್ದೇಶನಾಲಯ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ಹೈಕೋರ್ಟ್‌ನ ವಿಭಾಗೀಯ ಪೀಠ ಹಂಪಿ ಅಭಿವೃದ್ಧಿ ವಿಶ್ವಪರಂಪರಾ ಪ್ರದೇಶಾಭಿವೃದ್ಧಿ ನಿರ್ವಹಣಾ ಪ್ರಾಧಿಕಾರ ಇಲಾಖೆಗೆ ಸೂಕ್ತ ಪೊಲೀಸ ಭದ್ರತೆಯನ್ನು ಒದಗಿಸಬೇಕು ಮತ್ತು ಇದೇ 12ರೊಳಗೆ ಸರ್ವೇ ಕಾರ್ಯ ಮುಗಿಸಿ ಹೈಕೋರ್ಟ್‌ಗೆ ಮಾಹಿತಿ ಸಲ್ಲಿಸಲು ತಿಳಿಸಿರುವ ಕಾರಣ ಬುಧವಾರ ಭಾರತೀಯ ಸರ್ವೇಕ್ಷಣಾ ಅಧಿಕಾರಿಗಳ ತಂಡ ಹೊಸಪೇಟೆಗೆ ಆಗಮಿಸಿ ಸರ್ವೇ ಕಾರ್ಯವನ್ನು ಆರಂಭಿಸಲಿದೆ ಎಂದು ಸ್ಥಳೀಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ಪ್ರಾಧಿಕಾರದ ಪ್ರಭಾರ ಆಯುಕ್ತ ಕರೀಗೌಡ ಪ್ರಜಾವಾಣಿಯೊಂದಿಗೆ ಮಾತನಾಡಿ ಹೈಕೋರ್ಟ್ ನಿರ್ದೇಶನ ದಂತೆ ಸಮೀಕ್ಷಾ ಕಾರ್ಯಕ್ಕೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುವುದು ಈಗಾಗಲೆ ಸಿದ್ದಪಡಿಸಿರುವ ಅನಧಿಕೃತ ನಿರ್ಮಾಣಗಳ ಪಟ್ಟಿಯನ್ನು ತುಲನೆ ಮಾಡಿ ವಾಸ್ತವ ವರದಿಯನ್ನು ನಿಗದಿತ ಸಮಯದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲು ಪ್ರಾಧಿಕಾರ ಎಲ್ಲ ಸಹಕಾರ ನೀಡಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.