ADVERTISEMENT

ಹಗಲುವೇಷದ ಈರಣ್ಣಗೆ ಪ್ರಶಸ್ತಿಯ ಗೌರವ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 3:45 IST
Last Updated 11 ಫೆಬ್ರುವರಿ 2012, 3:45 IST

ಹೊಸಪೇಟೆ: ಜನಪದ ಸಂಸ್ಕೃತಿಯ `ಹಗಲು ವೇಷ~ ಕಲಾವಿದ ಕೆ.ಈರಣ್ಣಗೆ 2011ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹೊಸಪೇಟೆ ತಾಲ್ಲೂಕಿನ ವೆಂಕಟಾಪುರ ಕ್ಯಾಂಪ್ ನಿವಾಸಿ ಯಾದ ಇವರು 3ರಿಂದ 73ನೇ ವಯಸ್ಸಿನ ವರೆಗೂ ಅಪಾರ ಪರಿಶ್ರಮದ ಮೂಲಕವೇ ಹಗಲು ವೇಷದಲ್ಲಿ ಸಮಾಜದ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಂಡರು.

ಸ್ವಾವಲಂಬಿಯಾಗಿ ತನ್ನ ಹಾಗೂ ತನ್ನ ಕುಟುಂಬವನ್ನು ಸಾಕಿ ಸಲುಹಿದ ಈರಣ್ಣನ ಕಲೆ, ಸಂಸ್ಕೃತಿ ಮತ್ತು ಪರಂಪರಾಗತವಾಗಿ ನಡೆದು ಬಂದ ಕಲೆಗೆ ಜೀವ ತುಂಬಿದ ಬದುಕಿನ ಸಂದ್ಯಾಕಾಲದಲ್ಲಿ ಸಂದ `ಜಾನಪದ ಅಕಾಡೆಮಿ ಪ್ರಶಸ್ತಿ~  ನೆಮ್ಮದಿಯ ಜೊತೆ ಕಲೆಯನ್ನು ಮುಂದುವರಿಸು ವವರನ್ನು ಸೃಷ್ಟಿಸುವ ಹೊಸ ಆಸೆಯೊಂದನ್ನು ಹುಟ್ಟುಹಾಕಿದೆ ಎಂಬುವುದಕ್ಕೆ ಪ್ರಶಸ್ತಿ ಪಡೆದ ಕೆ.ಈರಣ್ಣನ ಮನ ತುಂಬಿದ ಮಾತು ಸಾಕ್ಷಿ ಆಯಿತು.

ಜನಪದ ಕಲಾ ರೂಪಗಳಾದ `ಹಗಲು ವೇಷ~ ಬಹುರೂಪಿಗಳು, ಜಾತಿಗಾರರು ಎಂದೆಲ್ಲಾ ಕರೆಯುವ ಪೌರಾಣಿಕ ರಂಗಪ್ರದರ್ಶನಗಳನ್ನು ಮನೋಜ್ಞವಾಗಿ ಅಭಿನಯಿಸುವಲ್ಲಿ ನಿಪುಣ ಈರಣ್ಣ. ಅಲ್ಲದೆ ವೆಂಕಟಾಪುರದಲ್ಲಿ ಇರುವ 14 ಕುಟುಂಬಗಳ ಪೈಕಿ ಇಂದು ಕೇವಲ 4 ಕುಟುಂಬ ಗಳ ಈ ಕಲೆಯಲ್ಲಿ ತೊಡಗಿರುವುದಕ್ಕೆ ಆತಂಕಗೊಂಡಿರು ಇವರು  ತನ್ನ ನಾಲ್ವರು ಮಕ್ಕಳಿಗೂ ಈ ಕಲೆಯಲ್ಲಿಯೇ ತೊಡಗುವಂತೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಕಿಷ್ಕಿಂಧೆಯ ಪ್ರದೇಶವಾದ ವೆಂಕಟಾಪುರದ ಈ ಈರಣ್ಣ ಹನುಮ ವೇಷದಲ್ಲಿ ಚಿರಪರಿಚಿತ. ನೆಲೆಯನ್ನು ಬಯಸದೇ, ಮನೆ-ಮನೆ ಊರು-ಕೇರಿಗಳನ್ನು ಸುತ್ತಾಡುತ್ತಾ ರಾಮ. ಕೃಷ್ಣ, ಬಸವ, ಶುಕ್ರಾಚಾರ್ಯ, ಅರ್ಧನಾರೀಶ್ವರ, ಮೋಹಿನಿ ಭಸ್ಮಾಸುರ ಲಂಬಾಣಿ ವೇಷಧಾರಿಯಾಗಿ ಯಾವುದೆ ಪಾತ್ರಕ್ಕೂ ಸೈ ಎನ್ನಿಸಿಕೊಂಡು ತನ್ನ ಪ್ರದರ್ಶನದ ಜೊತೆ ಜಾನಪದ ಹಾಡುಗಳನ್ನು ಹೇಳುವ ಮೂಲಕ ಹಗಲುವೇಷ ಪ್ರದರ್ಶನ ನೋಡ ನಿಂತವರನ್ನು ಕಟ್ಟಿಹಾಕುವ ಕಲಾವಂತಿಕೆ ರೂಢಿಸಿ ಕೊಂಡಿದ್ದಾರೆ ಈರಣ್ಣ. 

ಹರ್ಷ: ಹಗಲುವೇಷದ ಮೂಲಕ ನಮ್ಮ ಪೂರ್ವಜರು ಹೇಳಿದ ಕಲೆ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ನಮಗೆ ಜನಪದ ಅಕಾಡೆಮಿ ಪ್ರಶಸ್ತಿ ನೀಡಿ ಗುರುತಿಸಿದ್ದು ಸಂತೋಷ ತಂದಿದೆ. ಜೀವನದ ಅನಿವಾರ‌್ಯವಾದರೂ ಇದರ ಮಹತ್ವ ಅಪಾರವಾದದ್ದು. ಕಲೆಯನ್ನು ಉಳಿಸಬೇಕಾಗಿದೆ. ದೃಶ್ಯ ಮಾಧ್ಯಮಗಳು ಬೆಳವಣಿಗೆ ಕಲೆಗೆ ಮಾರಕವಾಗಿದ್ದು ಸರ್ಕಾರ ಮತ್ತು ಅಕಾಡೆಮಿಗಳು ಮಾಧ್ಯಮಗಳ ಮೂಲಕ ಬೆಳವಣಿಗೆಗೆ ಹಾಗೂ ಅಲ್ಲಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಉಳಿಸಲು ಕ್ರಮ ಕೈಗೊಳ್ಳಬೇಕು, ಹಂಪಿ ವಿಜಯನಗರದ ಪರಂಪರೆಯ ಆಶ್ರಯದಲ್ಲಿ ಇಂತಹ ಅನೇಕ ಕಲೆಗಳು ಇದ್ದು ಅವುಗಳನ್ನು ಉಳಿಸಲು ಬೆಳೆಸಲು ಸರ್ಕಾರದ ನೆರವು ಬೇಕಾಗಿದೆ.
 
ನನ್ನ ಮತ್ತು ನಮ್ಮ ಮಕ್ಕಳ ಜೀವನ ನಿರ್ವಹಣೆಗೆ ಯಾವುದೆ ತೊಂದರೆ ಇಲ್ಲದಿದ್ದರೂ ಭವಿಷ್ಯದಲ್ಲಿ ಕಲೆಯ ಉಳಿಯುವಿಕೆಯ ದೃಷ್ಟಿಯಿಂದ ಮೂಲ ಸೌಕರ್ಯಗಳನ್ನು  ಒಳಗೊಂಡ ತರಬೇತಿ ಕೇಂದ್ರ ಸರ್ಕಾರ ಮಾಡಿದ್ದಾದರೆ ನಿರ್ವಹಣೆ ಮಾಡುವುದಾಗಿ ಜೀವನದ ಸಂಧ್ಯಾ ಕಾಲದಲ್ಲಿ ಇರುವ ಕಲಾವಿದರುಗಳಿಗೆ ಮಾಸಾಶನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳುತ್ತಾರೆ. ತಮ್ಮ ಎದೆಯಾಳದ ಮಾತುಗಳಿಂದ ಜನಪದ ಅಕಾಡೆಮಿ ಗುರುತಿಸಿ ಗೌರವಿಸಲು ಮುಂದಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಈರಣ್ಣ ಅವರಿಗೆ ಜನಪದ ಅಕಾಡೆಮಿ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.