ADVERTISEMENT

ಹತ್ತು ಸಾವಿರ ಜನರಿಂದ ಸಹಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 8 ಮೇ 2017, 6:45 IST
Last Updated 8 ಮೇ 2017, 6:45 IST

ಹೊಸಪೇಟೆ: ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ‘ನಮ್ಮ ಹೆಮ್ಮೆ ನಮ್ಮ ಹೊಸಪೇಟೆ’ ಶೀರ್ಷಿಕೆ ಅಡಿ ನಗರದ ರೋಟರಿ ವೃತ್ತದಲ್ಲಿ ಭಾನುವಾರ ಸಹಿ ಸಂಗ್ರಹ ಅಭಿಯಾನ ನಡೆಯಿತು.

ನಾಲ್ಕು ಅಡಿ ಎತ್ತರ, 100 ಅಡಿ ಉದ್ದದ ಬೃಹತ್‌ ಪರದೆ ಮೇಲೆ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಅನ್ಯ ಭಾಗಗಳ ಪ್ರವಾಸಿಗರು ಸಂಭ್ರಮದಿಂದ ಸಹಿ ಮಾಡಿದರು.

ನಗರವನ್ನು ಸ್ವಚ್ಛ ವಾಗಿಡಲು ಶ್ರಮಿಸುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಯುವಕ, ಯುವತಿಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಂಚಾರ ಹಾಗೂ ಸಿವಿಲ್‌ ಪೊಲೀಸರು ಸಹಿ ಮಾಡಿದರು. ಸ್ವಯಂ ಸೇವಕರು ದಾರಿ ಹೋಕರಿಗೆ ಸ್ವಚ್ಛತೆಗೆ ಸಂಬಂಧಿಸಿದ ಕರಪತ್ರಗಳನ್ನು ವಿತರಿಸಿದರು.

ADVERTISEMENT

ಇದಕ್ಕೂ ಮುನ್ನ ನಗರಸಭೆ ಅಧ್ಯಕ್ಷ ಅಬ್ದುಲ್‌ ಖದೀರ್‌ ಅವರು ಸಹಿ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ‘ನಗರದ ಎಲ್ಲ 35 ವಾರ್ಡ್‌ಗಳಿಂದ ವ್ಯವಸ್ಥಿತವಾಗಿ ಕಸ ಸಂಗ್ರಹಿಸಲಾಗುವುದು. ಪ್ರತಿಯೊಂದು ವಾರ್ಡ್‌ಗೆ ಪ್ರತ್ಯೇಕ ಟಿಪ್ಪರ್‌ ವ್ಯವಸ್ಥೆ ಮಾಡಲಾಗುವುದು. ಜತೆಗೇ ಎಲ್ಲ ಬಡಾವಣೆಗಳಲ್ಲಿ ಕಸದ ತೊಟ್ಟಿ ಇಡಲಾಗುವುದು’ ಎಂದು ತಿಳಿಸಿದರು.

‘ಹೊಸಪೇಟೆ ಸಮೀಪದಲ್ಲಿಯೇ ವಿಶ್ವ ಪಾರಂಪರಿಕ ತಾಣ ಹಂಪಿ ಇರುವುದರಿಂದ ದೇಶ–ವಿದೇಶಗಳಿಂದ ನಿತ್ಯ ನೂರಾರು ಜನ ನಗರಕ್ಕೆ ಬರುತ್ತಾರೆ. ಹೊರಗಿನವರಿಗೆ ನಮ್ಮ ನಗರದ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಬೇಕು. ನಾವು ಕೂಡ ಆರೋಗ್ಯವಂತರಾಗಿ ಇರಬೇಕು ಎಂದರೆ ಎಲ್ಲರೂ ಸ್ವಚ್ಛತೆಗೆ ಒತ್ತು ಕೊಡಬೇಕು’ ಎಂದು ಹೇಳಿದರು.

‘ಕ್ಲೈಂಟ್‌ ಟು ಕಸ್ಟಮರ್‌’ (ಸಿ2ಸಿ) ಸಂಸ್ಥೆಯ ಸಂಸ್ಥಾಪಕ ಶ್ರೀಧರ್‌ ಮಾತನಾಡಿ, ‘ನಗರಸಭೆ, ಜೂನಿಯರ್‌ ಚೇಂಬರ್‌ ಆಫ್‌ ಇಂಡಿಯಾ (ಜೆ.ಸಿ.ಐ) ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಜನರಲ್ಲಿ ಸ್ವಚ್ಛತೆ ಬಗ್ಗೆ ತಿಳಿವಳಿಕೆ ಮೂಡಿಸುವುದು. ಜನರಲ್ಲಿ ಜಾಗೃತಿ ಮೂಡಿದರೆ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಹತ್ತು ಸಾವಿರ ಜನರ ಸಹಿ ಸಂಗ್ರಹ ಸಾಂಕೇತಿಕವಷ್ಟೇ’ ಎಂದರು.

‘ನಮ್ಮ ಹೊಸಪೇಟೆ ನಮ್ಮ ಹೆಮ್ಮೆ’ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಯುಟ್ಯೂಬ್‌ ಹಾಗೂ ಟ್ವಿಟರ್‌ಗೆ ಅಪ್‌ಲೋಡ್‌ ಮಾಡಲಾಗಿದೆ. ಬರುವ ದಿನಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.

ನಗರಸಭೆ ಸದಸ್ಯರಾದ ಚಂದ್ರಕಾಂತ ಕಾಮತ್‌, ರೂಪೇಶ್‌ ಕುಮಾರ್‌, ಶ್ರೀಧರ್‌ ನಾಯ್ಡು, ಪರಿಸರ ಎಂಜಿನಿಯರ್‌ ಶಿಲ್ಪಾಶ್ರೀ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಂದೀಪ್ ಸಿಂಗ್‌, ಮುಖಂಡ ಧರ್ಮೇಂದ್ರ ಸಿಂಗ್‌, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ತಾಲ್ಲೂಕು ಅಧ್ಯಕ್ಷ ಅಶ್ವಿನ್‌ ಕೋತಂಬ್ರಿ, ಉದ್ಯಮಿ ಸೈಯದ್‌ ನಾಜಿಮುದ್ದೀನ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.