ADVERTISEMENT

ಹದವಾದ ಮಳೆ: ಬಿತ್ತನೆಗೆ ಸಿದ್ಧತೆ

ಹೊಲ ಹದಗೊಳಿಸಿದ ರೈತರು: ಬಿತ್ತನೆ ಬೀಜ ದಾಸ್ತಾನು

​ಪ್ರಜಾವಾಣಿ ವಾರ್ತೆ
Published 28 ಮೇ 2018, 10:01 IST
Last Updated 28 ಮೇ 2018, 10:01 IST
ಕೂಡ್ಲಿಗಿ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಶನಿವಾರ ತಾಲ್ಲೂಕಿನ ಅಮರದೇವರಗುಡ್ಡ ಗ್ರಾಮದ ಬಳಿ ಜಾತಪ್ಪ ಎನ್ನುವರ ಹೊಲದಲ್ಲಿ ಮೆಕ್ಕೆ ಜೋಳ ಬಿತ್ತನೆಯಲ್ಲಿ ತೊಡಗಿರುವ ಮಹಿಳೆಯರು.
ಕೂಡ್ಲಿಗಿ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಶನಿವಾರ ತಾಲ್ಲೂಕಿನ ಅಮರದೇವರಗುಡ್ಡ ಗ್ರಾಮದ ಬಳಿ ಜಾತಪ್ಪ ಎನ್ನುವರ ಹೊಲದಲ್ಲಿ ಮೆಕ್ಕೆ ಜೋಳ ಬಿತ್ತನೆಯಲ್ಲಿ ತೊಡಗಿರುವ ಮಹಿಳೆಯರು.   

ಕೂಡ್ಲಿಗಿ: ವಾರದಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಹದಗೊಳಿಸಿದ ಹೊಲಗಳಲ್ಲಿ ರೈತರು ಬಿತ್ತನೆ ಕಾರ್ಯಕ್ಕೆ ಶನಿವಾರದಿಂದಲೇ ಚಾಲನೆ ನೀಡಿದ್ದಾರೆ.

ಬಿತ್ತನೆಗೆ ತಾಲ್ಲೂಕು ಕೃಷಿ ಇಲಾಖೆ ಸನ್ನದ್ಧವಾಗಿದೆ. ಜನವರಿ 1ರಿಂದ ಮೇ 9ರವರೆಗೆ ತಾಲ್ಲೂಕಿನಲ್ಲಿ ವಾಡಿಕೆಯಂತೆ 45 ಮಿ.ಮೀ ಮಳೆಯಾಗಬೇಕಿದ್ದು, ಈ ಸಾಲಿನಲ್ಲಿ 89 ಮಿಮೀ ಮಳೆಯಾಗಿದೆ. ತಾಲ್ಲೂಕಿನ ಬಹುತೇಕ ಕೆರೆಕಟ್ಟೆಗಳಿಗೆ ನೀರು ಹರಿದು ಬಂದು ರೈತರಲ್ಲಿ ಮೊಗದಲ್ಲಿ ನಗುಮೂಡಿದೆ.

ತಾಲೂಕಿನಲ್ಲ್ಲಿ 84 ಸಾವಿರ ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಇದ್ದು, ಈ ಪೈಕಿ ಶೇ 97ರಷ್ಟು ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ತಾಲ್ಲೂಕಿನ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ನಾಲ್ಕು ಹೋಬಳಿ ಕೇಂದ್ರಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು.

ADVERTISEMENT

ಮುಂಗಾರಿನಲ್ಲಿ ಭತ್ತ 450 ಹೆಕ್ಟೇರ್, ಜೋಳ 3,377 ಹೆಕ್ಟೇರ್, ಮೆಕ್ಕೆಜೋಳ 18,050 ಹೆಕ್ಟೇರ್, ಸಜ್ಜೆ 6,705 ಹೆಕ್ಟೇರ್, ತೊಗರಿ 3,185 ಹೆಕ್ಟೇರ್, ರಾಗಿ 6,745 ಹೆಕ್ಟೇರ್, ಸಜ್ಜೆ 6,705 ಹೆಕ್ಟೇರ್, ಶೇಂಗಾ 39,190 ಹೆಕ್ಟೇರ್, ಹತ್ತಿ 1,100 ಹೆಕ್ಟೇರ್, ಸಿರಿಧಾನ್ಯ 3,200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ.

ಬೀಜಗಳ ಖರೀದಿಗೆ ರೈತರಿಗೆ ರಿಯಾಯಿತಿ ನೀಡಲಾಗುತ್ತಿದೆ. ಜೋಳ ಬೀಜಕ್ಕೆ ಸಾಮಾನ್ಯ ವರ್ಗದ ರೈತರಿಗೆ ₹30, ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ರೈತರಿಗೆ ₹45 ಹಾಗೂ ಮೆಕ್ಕೆಜೋಳ, ಶೇಂಗಾ ರಿಯಾಯಿತಿ ನೀಡಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್ ತಿಳಿಸಿದ್ದಾರೆ.

ರಸಗೊಬ್ಬರ ಪಡೆಯಲು ಕೃಷಿ ಅಂಗಡಿಗಳಲ್ಲಿ ರೈತರು ಆಧಾರ್ ಸಂಖ್ಯೆ ನೀಡವುದು ಕಡ್ಡಾಯವಾಗಿದೆ. ಶುಕ್ರವಾರ ಪಟ್ಟಣದಲ್ಲಿ ರಸಗೊಬ್ಬರ ಕೊಳ್ಳಲು ಬಂದಿದ್ದ ಕೆಲವು ರೈತರು ಆಧಾರ್ ಸಂಖ್ಯೆ ಗೊತ್ತಿಲ್ಲ ಪರದಾಡಿದರು.

**
ಮಳೆಗಾಲದ ಆರಂಭದಲ್ಲಿಯೇ ಉತ್ತಮ ಮಳೆಯಾಗಿde. ಸಕಾಲದಲ್ಲಿ ಬಿತ್ತನೆಗೆ ಸಹಕಾರಿಯಾಗಿದೆ. ಮುಂದೆಯೂ ಇದೇ ರೀತಿ ಮಳೆ ಬಂದರೆ ರೈತರ ಸಂಕಷ್ಟ ದೂರವಾಗಲಿದೆ
ಗೌಡ್ರು ಮಲ್ಲಪ್ಪ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.