ADVERTISEMENT

ಹೊಸಪೇಟೆ: ಮದ್ಯದಂಗಡಿ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 6:03 IST
Last Updated 17 ಮಾರ್ಚ್ 2018, 6:03 IST
ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ಅವರು ಮದ್ಯದ ಅಂಗಡಿಗೆ ಸ್ವತಃ ಅವರೇ ಬೀಗ ಹಾಕಿದರು –ಪ್ರಜಾವಾಣಿ ಚಿತ್ರ
ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ಅವರು ಮದ್ಯದ ಅಂಗಡಿಗೆ ಸ್ವತಃ ಅವರೇ ಬೀಗ ಹಾಕಿದರು –ಪ್ರಜಾವಾಣಿ ಚಿತ್ರ   

ಹೊಸಪೇಟೆ: ಇಲ್ಲಿನ ಬಸ್‌ ನಿಲ್ದಾಣ ಸಮೀಪ ಪರವಾನಗಿ ಇಲ್ಲದೆ ನಡೆಸುತ್ತಿದ್ದ ಮದ್ಯದಂಗಡಿ ಮೇಲೆ ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಸಂಜೆ ದಾಳಿ ನಡೆಸಿ, ಅದಕ್ಕೆ ಬೀಗ ಮುದ್ರೆ ಹಾಕಿದರು.

ಸಂಜೆ 7ರ ಸುಮಾರಿಗೆ ಏಕಾಏಕಿ ದಾಳಿ ನಡೆಸಿದ ಅವರು, ಅಂಗಡಿ ಮಾಲೀಕ ಕೆ.ಎಂ. ವೀರೇಶ್‌ ಅವರಿಂದಪರವಾನಗಿ ಪತ್ರ ತೋರಿಸುವಂತೆ ಕೇಳಿದರು. ಅಬಕಾರಿ ಇಲಾಖೆಯಿಂದ ಪಡೆದಿರುವ ಪರವಾನಗಿ ಪತ್ರ ತೋರಿಸಿದರು. ಆದರೆ, ನಗರಸಭೆಯಿಂದ ಪರವಾನಗಿ ಪಡೆದಿರಲಿಲ್ಲ. ಹಾಗಾಗಿ ಅಧಿಕಾರಿಗಳಿಂದ ಅಂಗಡಿ ಮುಚ್ಚಿಸಿ, ಅದಕ್ಕೆ ಬೀಗ ಮುದ್ರೆ ಹಾಕಿಸಿದರು.

‘ನಗರಸಭೆಗೆ ಸೇರಿದ ಕಟ್ಟಡದಲ್ಲಿ ಮದ್ಯದ ಅಂಗಡಿ ನಡೆಸುತ್ತಿದ್ದಾರೆ. ಆದರೆ, ನಗರಸಭೆಯಿಂದ ಪರವಾನಗಿ ಪಡೆದುಕೊಂಡಿಲ್ಲ. ಅಂಗಡಿಯ ಹಿಂಭಾಗದ ಅಂಗಡಿಯಲ್ಲಿ ಅನುಮತಿ ಇಲ್ಲದೆ ಸಣ್ಣ ಬಾರ್‌ ನಡೆಸುತ್ತಿದ್ದಾರೆ. ಹಾಗಾಗಿ ಎರಡೂ ಸ್ಥಳಗಳಿಗೆ ಬೀಗ ಮುದ್ರೆ ಹಾಕಲಾಗಿದೆ’ ಎಂದು ಗಾರ್ಗಿ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮದ್ಯದಂಗಡಿಯಲ್ಲಿ ಕಳವು: ಇಲ್ಲಿನ ಟಿ.ಬಿ. ಡ್ಯಾಂ ರಸ್ತೆಯಲ್ಲಿರುವ ‘ಪೆಗ್‌ ಅಂಡ್‌ ಪೆಗ್‌’ ಮದ್ಯದ ಅಂಗಡಿಯಲ್ಲಿ ಗುರುವಾರ ನಸುಕಿನ ಜಾವ ಕಳ್ಳತನ ನಡೆದಿದ್ದು, ₹ 20 ಸಾವಿರ ಮೌಲ್ಯದ ಮದ್ಯದ ಬಾಟಲಿ ಕದ್ದೊಯ್ಯಲಾಗಿದೆ.

‘18ರಿಂದ 21 ವಯಸ್ಸಿನೊಳಗಿನ ಐವರು ಅಂಗಡಿಯ ಶೆಟರ್‌ ಮುರಿದು ಈ ಕೃತ್ಯ ಎಸಗಿದ್ದಾರೆ. ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ದಾಖಲಾಗಿದೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಟಿ.ಬಿ. ಡ್ಯಾಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.