ಕೂಡ್ಲಿಗಿ: ಜಿಲ್ಲಾ ಉಸ್ತುವಾರಿ ಮಂತ್ರಿ ಪಿ.ಟಿ.ಪರಮೇಶ್ವರನಾಯ್ಕ ಜಿಲ್ಲೆಯಲ್ಲಿ ವಸೂಲಿ ಮಂತ್ರಿಯಾಗಿದ್ದು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದನ್ನು ಬಿಟ್ಟು ವಸೂಲಿ ದಂಧೆಗಿಳಿದಿರುವುದು ಜನಸಾಮಾನ್ಯರಿಗೂ ಗೊತ್ತಿದೆ. ಈಗಾಗಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದು ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ ಎನ್.ಟಿ. ಎನ್.ಟಿ. ಬೊಮ್ಮಣ್ಣ ಹೇಳಿದರು.
ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮೂರು ಗುಂಪುಗಳಾಗಿದ್ದು ಅವರ ಆಂತರಿಕ ಭಿನ್ನಮತ ಬಿಜೆಪಿಗೆ ಈ ಬಾರಿ ವರದಾನವಾಗಲಿದೆ. ಶ್ರೀ ರಾಮುಲು ಅತ್ಯಧಿಕ ಮತಗಳಿಂದ ಗೆಲ್ಲುತ್ತಾರೆ ಎಂದು ಹೇಳಿದರು.
ಶ್ರೀರಾಮುಲುಗೆ ಬಿಜೆಪಿ ಟಿಕೇಟ್ ಕೊಟ್ಟಿರುವುದು ಸ್ವಾಗತಾರ್ಹ, ಕಾಂಗ್ರೆಸ್ ಪಕ್ಷದಲ್ಲಿನ ರಾಜ್ಯದ ಪ್ರಭಾವಿ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಎಂ.ವೀರಪ್ಪ ಮೊಯ್ಲಿ, ಧರ್ಮಸಿಂಗ್ ಎಲ್ಲರೂ ನನಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೇಟ್ ನೀಡುತ್ತೇವೆ ನೀನು ಕ್ಷೇತ್ರದಲ್ಲಿ ಸಂಘಟನೆ ಮಾಡಲು ಹೋಗು ಎಂದು ಕಳಿಸಿ ನಂತರ ಟಿಕೇಟ್ ನೀಡದೇ ಮೋಸ ಮಾಡಿದರು. ಈಗಾಗಿ ನಾನು ಕಾಂಗ್ರೆಸ್ ಪಕ್ಷದಲ್ಲಿ ನಂಬಿಕೆ ಕಳೆದುಕೊಂಡಿದ್ದು ನನ್ನ ಮಕ್ಕಳಿಗೂ ಕಾಂಗ್ರೆಸ್ ಸೇರಬೇಡಿ ಎಂದು ಹೇಳುತ್ತೇನೆ ಎಂದು ಎನ್.ಟಿ. ಬೊಮ್ಮಣ್ಣ ರಾಜ್ಯ ಕಾಂಗ್ರೆಸ್ ಮುಖಂಡರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೂಡ್ಲಿಗಿ ಕ್ಷೇತ್ರದ ಶಾಸಕ ನಾಗೇಂದ್ರ ಅವರು ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ಎದುರಿಸುತ್ತಿರುವುದರಿಂದ ಈಗ ಕ್ಷೇತ್ರ ಅನಾಥವಾಗಿದೆ. ನಾವು ಇದೇ ತಾಲ್ಲೂಕಿನವರು ನನ್ನ ಕ್ಷೇತ್ರದ ಜನತೆಗೆ ಅನ್ಯಾಯವಾಗಿದೆ ಈಗಾಗಿ ನಾನು ಪುನಾ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನನ್ನ ತಾಲ್ಲೂಕಿನ ಜನತೆಗೆ ನ್ಯಾಯ ಒದಗಿಸಿಕೊಡುತ್ತೇನೆ ಎಂದರು.
‘ಪಿ.ಎ.ಗಳ ದರ್ಬಾರ್ ಕೊನೆಗೊಳ್ಳಲಿ’: ಹಿರಿಯ ಮುಖಂಡ ಗುಡೇಕೋಟೆ ರಾಘವೇಂದ್ರರಾವ್, ಕೂಡ್ಲಿಗಿ ಕ್ಷೇತ್ರದಲ್ಲಿ ಈ ಹಿಂದೆ ಶಾಸಕರ ಪಿಎಗಳ ಆಡಳಿತದಿಂದ ಮುಖಂಡರು, ಕಾರ್ಯಕರ್ತರು ಬೇಸತ್ತಿದ್ದಾರೆ. ಈಗಾಗಿ ಶಾಸಕ ಬಿ.ನಾಗೇಂದ್ರ ಕೂಡ್ಲಿಗಿ ಕ್ಷೇತ್ರದಲ್ಲಿ ಪಿ.ಎ.ಗಳ ದರ್ಬಾರ್ ಕೈಬಿಟ್ಟು ಆಡಳಿತ ನಡೆಸಿದರೆ ಮಾತ್ರ ಕ್ಷೇತ್ರದಲ್ಲಿ ಜನತೆ ಬಿಜೆಪಿ ಬೆಂಬಲಿಸುತ್ತಾರೆ. ಇಲ್ಲದಿದ್ದರೆ ಅದರ ಪ್ರತಿಫಲ ಪಡೆಯಬೇಕಾದಿತು ಎಂದರು. ಬಿಜೆಪಿ ಅಭ್ಯರ್ಥಿ ಶ್ರೀ ರಾಮುಲು ಸಹ ಪಿಎ ಗಳ ಮೂಲಕ ಚುನಾವಣೆ ನಡೆಸಿದಲ್ಲಿ ಜನತೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಪಿಎಗಳ ದರ್ಬಾರ್ ಕೊನೆಗೊಂಡು ಆಯಾಭಾಗದ ಮುಖಂಡರಿಗೆ ಪ್ರಾತಿನಿಧ್ಯ ನೀಡಿದರೆ ಮಾತ್ರ ಬಿಜೆಪಿ ಪಕ್ಷ ಕೂಡ್ಲಿಗಿ ಕ್ಷೇತ್ರದಲ್ಲಿ ಮತ್ತಷ್ಟು ಪ್ರಬಲವಾಗಲು ಸಾಧ್ಯ ಎಂದು ತಿಳಿಸಿದರು. ಕೂಡ್ಲಿಗಿ ಕ್ಷೇತ್ರದಲ್ಲಿ ಎನ್. ಟಿ. ಬೊಮ್ಮಣ್ಣ ನಮ್ಮ ನಾಯಕರಾಗಿದ್ದು ಅವರ ನೇತೃತ್ವದಲ್ಲಿ ಈ ಬಾರಿ ಚುನಾವಣೆ ಎದುರಿಸಿ ಶ್ರೀರಾಮುಲು ಅವರನ್ನು ಗೆಲ್ಲಿಸುತ್ತೇವೆ ಎಂದರು.
‘ಪ್ರಸ್ತುತ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿ ತಲುಪಿದ್ದು ಇಂದು ನರೇಂದ್ರ ಮೋದಿ ದೇಶದ ಪ್ರಗತಿಗೆ ಅಗತ್ಯ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಬಿಎಸ್ ಆರ್ ಕಾಂಗ್ರೆಸ್‌ನ ಎಲ್. ಎಸ್.ಬಷೀರ್ ಅಹಮದ್ ಹೇಳಿದರು. ಹೀಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ನಮ್ಮ ನಾಯಕ ಶ್ರೀ ರಾಮುಲು ಹಿಂದೆಂದಿಗಿಂತಲೂ ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತಾರೆ. ಕೂಡ್ಲಿಗಿ ಕ್ಷೇತ್ರದ ಜನತೆ ಶ್ರೀ ರಾಮುಲು ಅವರನ್ನು ಕೈಬಿಡುವುದಿಲ್ಲ. ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳಿಗಿಂತ ಕೂಡ್ಲಿಗಿ ಕ್ಷೇತ್ರದಲ್ಲಿ ಅತ್ಯಧಿಕ ಮತಗಳನ್ನು ನೀಡುವ ಮೂಲಕ ಈ ಬಾರಿ ಇತಿಹಾಸ ಸೃಷ್ಟಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.