ಕೂಡ್ಲಿಗಿ: ಕತೆ, ಕವನ, ಸಾಹಿತ್ಯಕ್ಕೆ ಹೆಚ್ಚಿನ ಪ್ರಚಾರ ಸಿಗುತ್ತದೆ. ಆದರೆ, ಕೃಷಿ ಸಂಬಂಧಿತ ಬರಹಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇಂಥ ಸಂದರ್ಭದಲ್ಲಿ ಕೃಷಿ ಪ್ರಧಾನ ಬರಹಗಳನ್ನು ದಾಖಲೀಕರಿಸುವುದು ಅಗತ್ಯವಾಗಿದೆ ಎಂದು ಕೃಷಿ ತಜ್ಞ, ಹಾಸನ ಆಕಾಶವಾಣಿ ಅಧಿಕಾರಿ ಡಾ.ವಿಜಯ್ ಅಂಗಡಿ ತಿಳಿಸಿದರು.
ತಾಲ್ಲೂಕಿನ ಕಾನಮಡುಗು ದಾಸೋಹ ಮಠದಲ್ಲಿ ಪತ್ರಕರ್ತ ಭೀಮಣ್ಣ ಗಜಾಪುರ ಅವರ ಬಯಲುಸೀಮೆ ರೈತರ ಯಶೋಗಾಥೆಗಳು ಪುಸ್ತಕ ಬಿಡುಗಡೆ ಮತ್ತು ಜಾನಪದ ಸಿಂಚನ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದರು.
ಪುಸ್ತಕದಲ್ಲಿ ದಾಖಲಿಸಿದ ಸಂಗತಿಗಳು ಜೀವಂತವಿರುತ್ತವೆ. ಕೃಷಿ, ಪರಿಸರ ವಿಚಾರಗಳನ್ನು ಹೆಚ್ಚು ಪ್ರಚಾರ ಮಾಡಿ ರೈತರು, ಕೃಷಿಕರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಪರಿಸರ ಮತ್ತು ಕೃಷಿ ಕುರಿತು ಹೆಚ್ಚಾಗಿ ಜಾಗೃತಿ ಮೂಡಬೇಕಿದೆ ಎಂದರು.
ಪರಿಸರ ಪ್ರೇಮಿ ಸಾವಜ್ಜಿ ರಾಜೇಂದ್ರ ಪ್ರಸಾದ್ ಪುಸ್ತಕ ಬಿಡುಗಡೆಗೊಳಿಸಿದರು. ಕಾನಮಡುಗು ದಾ.ಮ.ಐಮಡಿ ಶರಣಾರ್ಯರು ಸಾನಿಧ್ಯ ವಹಿಸಿದ್ದರು. ಜಿ.ಪಂ. ಸದಸ್ಯ ಕೆ.ಎಂ. ಶಶಿಧರ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಮಾಜಿ ಅಧ್ಯಕ್ಷ ಎನ್.ಎಂ. ರವಿಕುಮಾರ್, ಕಿರುತೆರೆ ನಿರ್ದೇಶಕ ವೆಂಕಟೇಶ್ ಕೊಟ್ಟೂರು ಮಾತನಾಡಿದರು.
ಪ್ರಗತಿ ಪರ ಕೃಷಿಕರಾದ ಎಚ್. ಚಿದಾನಂದಪ್ಪ, ಗುಡೇಕೋಟೆ ಬೇಕರಿ ಸುರೇಶ್, ದೂಪದಹಳ್ಳಿ ತಳವಾರ ನಾಗರಾಜ, ಎ.ಚನ್ನಬಸಪ್ಪ, ಬಸವರಾಜ ಮಾಕನಡುಕು ಹುಲಿಕೆರೆ ಎಚ್.ವಿ. ಸಜ್ಜನ್, ಸುಲೋಚನಾ ಸಜ್ಜನ್, ನಾಗರಕಟ್ಟೆ ರಾಜೇಂದ್ರಪ್ರಸಾದ್, ಹರಾಳು ಕೆ.ನಾಗರಾಜ್, ವೆಂಕಟೇಶ್ ಕೊಟ್ಟೂರು, ರಾರಾವಿ ಚಿದಾನಂದ ಗವಾಯಿ ಅವರನ್ನು ಸನ್ಮಾನಿಸಲಾಯಿತು.
ಕಂಪ್ಲಿ ಪ್ರಶಾಂತ್ ಕುಮಾರ್, ಗೊಂದಲಿಗರ ಹನುಮಂತಪ್ಪ, ಹರಾಳು ಗೋಣೆಪ್ಪ, ಗುರುಶಂಕ್ರಪ್ಪ ಜಾನಪದ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಭೀಮಸಮುದ್ರ ಪೂಜಾ ಪ್ರಾರ್ಥಿಸಿದರು. ಟಿ.ಶರಣಪ್ಪ ಸ್ವಾಗತಿಸಿದರು. ಪಿ. ಶಿವರಾಜ ನಿರೂಪಿಸಿದರು. ಭೀಮಣ್ಣ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.