ADVERTISEMENT

‘ನಾಡೋಜ ಆಯ್ಕೆಯಲ್ಲಿ ಅಪಸ್ವರವಿಲ್ಲ’

ಹಂಪಿ ಕನ್ನಡ ವಿ.ವಿ. 22ನೇ ನುಡಿಹಬ್ಬ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:32 IST
Last Updated 18 ಡಿಸೆಂಬರ್ 2013, 5:32 IST

ಹೊಸಪೇಟೆ: ‘ಪ್ರಸಕ್ತ ಸಾಲಿನ ‘ನಾಡೋಜ’ ಗೌರವ ಪದವಿಗೆ ಮೂವರು ಗಣ್ಯರನ್ನು ಮಾತ್ರ ಆಯ್ಕೆ ಮಾಡಲಾಗಿದ್ದು, ಈ ಬಾರಿಯ ಆಯ್ಕೆಗೆ ಯಾವುದೇ ಅಪಸ್ವರ ಕೇಳಿ ಬಂದಿಲ್ಲ’ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ಸ್ಪಷ್ಟಪಡಿಸಿದರು.

ವಿದ್ಯಾರಣ್ಯದಲ್ಲಿರುವ ಹಂಪಿ ಕನ್ನಡ ವಿ.ವಿ.ಯ ಕ್ರಿಯಾಶಕ್ತಿ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಈ ಹಿಂದೆ 6ರಿಂದ 7ಜನ ಗಣ್ಯರಿಗೆ ‘ನಾಡೋಜ’ ಗೌರವ ಪದವಿ ಪ್ರದಾನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಈ ಸಂಖ್ಯೆಯನ್ನು ಮೂರಕ್ಕೆ ಸೀಮಿತಗೊಳಿಸಲಾಗಿದ್ದು, ವಿ.ವಿ.ಯ ಸಿಂಡಿಕೇಟ್‌ ಸದಸ್ಯರು ಹಾಗೂ ಆಯ್ಕೆ ಸಮಿತಿ ಸದಸ್ಯರು ಒಮ್ಮತದಿಂದ ಈ ಮೂವರು ಗಣ್ಯರನ್ನು ಆಯ್ಕೆ ಮಾಡಿದ್ದಾರೆ’ ಎಂದು ಅವರು ಹೇಳಿದರು.

‘ನ್ಯಾಯಾಂಗ ಕ್ಷೇತ್ರದಲ್ಲಿ ಪರಿಣಾ­ಮಕಾರಿಯಾಗಿ ಕಾರ್ಯ­ನಿರ್ವಹಿಸಿರುವ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ ಹೆಗ್ಡೆ, ನಿವೃತ್ತ ನ್ಯಾಯಾಧೀಶ, ಸಾಹಿತಿ ಹಾಗೂ ಹೋರಾಟಗಾರ ಕೂಡ್ಲಿಗಿ ತಾಲ್ಲೂಕಿನ ಕೋ.ಚೆನ್ನಬಸಪ್ಪ ಹಾಗೂ ಬಾಹ್ಯಾಕಾಶ ಕ್ಷೇತ್ರದ ಖ್ಯಾತ ವಿಜ್ಞಾನಿ ಎಸ್‌.ಕೆ.ಶಿವಕುಮಾರ ಅವರನ್ನು ಈ ಬಾರಿಯ ‘ನಾಡೋಜ’ ಗೌರವ ಪದವಿ ಪ್ರದಾನಕ್ಕೆ ಆಯ್ಕೆ ಮಾಡಲಾಗಿದೆ’ ಎಂದರು.

‘ಪುಸ್ತಕ ಪ್ರಕಟಣೆಗಾಗಿ ಈ ಬಾರಿ ಇ–ಟೆಂಡರ್‌ ಮೂಲಕ ಮುದ್ರಣಕಾರರನ್ನು ಆಯ್ಕೆ ಮಾಡಬೇಕಾಗಿದೆ. ಈ ಕಾರಣದಿಂದ ಈ ಬಾರಿ ‘ನುಡಿಹಬ್ಬ’ದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಅಲ್ಲದೆ ಈಗಾಗಲೇ ವಿ.ವಿ.ಯಲ್ಲಿ ಹಲವಾರು ರಾಷ್ಟ್ರೀಯ ವಿಚಾರ ಸಂಕಿರಣಗಳು ನಡೆದಿರುವುದರಿಂದ ‘ನುಡಿಹಬ್ಬ’ದ ಅಂಗವಾಗಿ ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಆಯೋಜಿಸಿರುವುದಿಲ್ಲ’ ಎಂದು ಅವರು ತಿಳಿಸಿದರು.

‘ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅವರು ತಮ್ಮ ಅಧಿಕಾರದ ಕೊನೆಯಲ್ಲಿ ಇರುವುದರಿಂದ ಈ ಬಾರಿ ವಿ.ವಿ. ಘಟಿಕೋತ್ಸವಕ್ಕೆ ಬರುವುದಾಗಿ ಭರವಸೆ ನೀಡಿದ್ದಾರೆ.

ಕುಲಸಚಿವ ಡಾ.ವಿಜಯ ಪೊಣಚ ತಂಬಂಡ, ಡೀನ್‌ಗಳಾದ ಡಾ.ಕೆ.ಎಂ.ಮೇತ್ರೆ, ಡಾ.ಡಿ.ಪಾಂಡುರಂಗಬಾಬು, ಡಾ.ಅಶೋಕಕುಮಾರ ರಂಜೇರೆ, ಡಾ.ಡಿ.ಮೀನಾಕ್ಷಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.