ADVERTISEMENT

‘ಪರಮಹಂಸರ ಆದರ್ಶ ಮಾದರಿಯಾಗಲಿ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 10:33 IST
Last Updated 6 ಮಾರ್ಚ್ 2014, 10:33 IST

ಹೊಸಪೇಟೆ: ‘ರಾಮಕೃಷ್ಣ ಪರಮ­ಹಂಸ, ಶಾರದ ಮಾತೆ ಹಾಗೂ ವಿವೇಕಾ­ನಂದರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ  ತತ್ವಾದರ್ಶ­ಗಳು ಹಾಗೂ ಅವರ ಸಾಧನೆಗಳನ್ನು ಯುವ ಜನಾಂಗ ಮಾದರಿಯನ್ನಾಗಿಟ್ಟುಕೊಳ್ಳಬೇಕು’ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇಲ್ಲಿನ ರಾಮಕೃಷ್ಣ ಗೀತಾಶ್ರಮದಲ್ಲಿ ಸೋಮವಾರ ಆಯೋಜಿಸಿದ್ದ ರಾಮಕೃಷ್ಣ ಪರಮಹಂಸರ ೧೭೯ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನಸಾಮಾನ್ಯರ ಏಳಿಗೆಗಾಗಿ ಜನ್ಮ­ತಾ­ಳಿದ ಈ ಮೂವರು ಪುಣ್ಯಾ­ತ್ಮರು ಸಾಧನೆಗಾಗಿ ತಮ್ಮದೆ ಮಾರ್ಗದಲ್ಲಿ ನಡೆದವರು. ಅವರನ್ನು ಹಾಗೂ ಅವರು ನಡೆದು ಬಂದ ದಾರಿಯನ್ನು ಅರ್ಥೈಸಿಕೊಂಡಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯ’ ಎಂದು ಹೇಳಿದರು.

ಸಾನಿಧ್ಯ ವಹಿಸಿ ಮಾತನಾಡಿದ ಬೆಂಗಳೂರಿನ ರಾಮಕೃಷ್ಣ ಯೋಗಶ್ರ­ಮದ ಅಧ್ಯಕ್ಷ ಸ್ವಾಮಿ ಯೋಗೇಶ್ವರಾ­ನಂದಜಿ ಮಹಾರಾಜ್, ‘ರಾಮಕೃಷ್ಣ ಪರಮಹಂಸರು ಧಾರ್ಮಿಕ ಕ್ಷೇತ್ರ­ದಲ್ಲಿಯೆ ಆಗ್ರ ಪಂಕ್ತಿಯಲ್ಲಿದ್ದಾರೆ. ಸ್ತ್ರೀ­ಯನ್ನೆ ಗುರುವಾಗಿ ಸ್ವೀಕರಿಸುವ ಮೂಲಕ ಸ್ತ್ರೀಯರಿಗೆ ವಿಶೇಷ ಸ್ಥಾನ-ಮಾನ ಕಲ್ಪಿಸಿಕೊಟ್ಟಿದ್ದರು’ ಎಂದು ಬಣ್ಣಿಸಿದರು.

‘ಪ್ರಸ್ತುತ ದೇಶಕ್ಕೆ ಆದರ್ಶ ವ್ಯಕ್ತಿ ಅಗತ್ಯವಾಗಿದ್ದು, ವಿವೇಕಾನಂದರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡ ಚಕ್ರವರ್ತಿ ಸೂಲಿಬೆಲೆ ಅವರು, ರಾಷ್ಟ್ರ-ಭಕ್ತಿ ಮೈಗೂಡಿಸಿಕೊಂಡು ಭವ್ಯ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಅವರು ದೇಶದ ಆದರ್ಶ ವ್ಯಕ್ತಿಯಾಗಲಿದ್ದಾರೆ’ ಎಂದರು.

ಸ್ಥಳೀಯ ರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷ ಸುಬೇದನಂದ ಸ್ವಾಮೀಜಿ, ಜಮಖಂಡಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಗದಾಧರಾನಂದಜಿ ಮಹಾರಾಜ್, ಸಮಾಜ ಸೇವಕಿ ಕವಿತಾ ಈಶ್ವರ ಸಿಂಗ್, ಪತಂಜಲಿ ಯೋಗ ಸಮಿತಿ ಉತ್ತರ ಪ್ರಾಂತ ಅಧ್ಯಕ್ಷ ಭವರಲಾಲ್, ಬಸವರಾಜ ನಲವತ­ವಾಡ್ ಮಾತನಾಡಿದರು. ಡಿವೈಎಸ್ಪಿ ಡಿ.ಡಿ.ಮಾಳಗಿ, ಕಮಲಾಕ್ಷ ಶಾನಬಾಗ, ಕಟ್ಟಾ ಮೋಹನ್ ಉಪಸ್ಥಿತರಿದ್ದರು. ವಕೀಲ ಕಲ್ಲಂಭಟ್ ಸ್ವಾಗತಿಸಿದರು. ಶಿಕ್ಷಕ ಹನುಮಂತಪ್ಪ ನಿರೂಪಿಸಿದರು.

ಭೂಮಿಪೂಜೆ
ಹೊಸಪೇಟೆ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾ­ರಿಗಳಿಗೆ ಸಂಸದೆ ಜೆ.ಶಾಂತಾ ಭೂಮಿಪೂಜೆ ನೆರವೇರಿಸಿದರು. ತಾಲ್ಲೂಕಿನ ೭೬ವೆಂಕಟಾಪುರ ಗ್ರಾಮದಲ್ಲಿ ಕಂಪ್ಲಿ ಮುಖ್ಯ ರಸ್ತೆಯಿಂದ ಅಗಸರ ಓಣಿಯಲ್ಲಿ - ತಾಯಪ್ಪನ ಮನೆಯವರೆಗೆ ₨ 4.50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ₨ 5 ಲಕ್ಷ ವೆಚ್ಚದಲ್ಲಿ ಕಂಪ್ಲಿ–- ಹೊಸಪೇಟೆ ಮುಖ್ಯ ರಸ್ತೆಯಿಂದ ಗುಡ್ಡದತಿಮ್ಮಪ್ಪ ರಸ್ತೆ ವರೆಗೆ ಸಿಸಿ ರಸ್ತೆ ನಿರ್ಮಾಣ, ಗ್ರಾಮದ ಎರಡನೇ ವಾರ್ಡಿನ ಅಂಗನವಾಡಿ ಹತ್ತಿರ ₨ 4 ಲಕ್ಷ ಅನುದಾನದಲ್ಲಿ ‘ರಂಗ ಮಂದಿರ’ ನಿರ್ಮಾಣ, ೭೬ವೆಂಕಟಾಪುರ ಕ್ಯಾಂಪಿನ ಗುಡ್ಡದ ತಿಮ್ಮಪ್ಪನ ಹತ್ತಿರ ₨ 2.5 ಲಕ್ಷದಲ್ಲಿ ಬಯಲು ರಂಗ ಮಂದಿರ ನಿರ್ಮಾಣ ಕಾಮಗಾರಿಗಳನ್ನು ಸಂಸದರ ನಿಧಿಯಲ್ಲಿ ಕೈಗೊಳ್ಳಲು ಭೂಮಿ ಪೂಜೆ ನೆರವೇರಿಸಲಾಯಿತು.

ಅಲ್ಲದೆ ₨ 10 ಲಕ್ಷ ವೆಚ್ಚದಲ್ಲಿ ಚಿತ್ರದುರ್ಗದ ಮದಕರಿ ನಾಯಕ ವಿದ್ಯಾ ಸಂಸ್ಥೆಯ ಕಮಲಾಪುರದ ಹಂಪಿ ವಿರೂಪಾಕ್ಷೇಶ್ವರ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಕೊಠಡಿ ನಿರ್ಮಾಣ, ₨ 3.25 ಲಕ್ಷ ವೆಚ್ಚದಲ್ಲಿ ಅನಂತಶಯನಗುಡಿ ಗ್ರಾಮದಲ್ಲಿ ಅಂಗವಿಕಲರ ಹಾಗೂ ಮಾನಸಿಕ ಅಸ್ವಸ್ಥರ ಸಮುದಾಯ ಭವನ ನಿರ್ಮಾಣಕ್ಕೆ ಶಾಂತಾ ಅವರು ಭೂಮಿಪೂಜೆ ನೆರವೇರಿಸಿದರು.

ಬಿಜೆಪಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ಪಂತರ್ ಜಯಂತ್, ದೇವರಮನಿ ಶ್ರೀನಿವಾಸ, ಜಂಬಾನಳ್ಳಿ ವಸಂತಣ್ಣ,  ತಾಲ್ಲೂಕು ಘಟಕದ ಅಧ್ಯಕ್ಷ ವಿನಾಯಕ ಸ್ವಾಮಿ, ತಳವಾರ ಶಿವರಾಮಪ್ಪ, ಕಟ್ಟೆ  ವೆಂಕಪ್ಪ, ಕಟ್ಟೆ ವಿರೂಪಾಕ್ಷ, ಸುರೇಶ ಕುಷ್ಟಗಿ, ಯಶಸ್ವಿನಿ ಕುಷ್ಟಗಿ, ಮೆಹಬೂಬ್ ಸಾಬ್, ರಾಮಲಿಂಗಪ್ಪ , ಕುರುಬರ ಲಿಂಗಪ್ಪ, ರಮಾದೇವಿ, ಕಾಮಾಕ್ಷಮ್ಮ, ಪ್ರಾಚಾರ್ಯ ಬಸವರಾಜ, ಅಕ್ಕ ಭಾರತಿ, ಪಟ್ಟಣ ಪಂಚಾಯ್ತಿ ಸದಸ್ಯ ಹನುಮಂತ, ನಾಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.