ADVERTISEMENT

‘ಶರಣರ ಚಿಂತನೆ ಸರ್ವಕಾಲೀಕ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 6:08 IST
Last Updated 16 ಸೆಪ್ಟೆಂಬರ್ 2013, 6:08 IST

ಬಳ್ಳಾರಿ: ಸಮಾನತೆ ಸಾರಿದ ಶರಣರ ಚಿಂತನೆಗಳಿಗೆ ಸಮನಾದ ಶಕ್ತಿ ಇಲ್ಲ. ಎಲ್ಲ ಕಾಲಕ್ಕೂ ಶರಣರ ಚಿಂತನೆಗಳು ಅನ್ವಯ­ವಾಗುವುದು ಶರಣ ತತ್ವಗಳ ಚಿಂತನೆ­ಯ ವಿಶೇಷತೆ ಎಂದು ಚಿತ್ರ­ದುರ್ಗದ ಶಾಂತಾ ನಾಗರಾಜ್ ಹೇಳಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ‘123ನೇ ಮಹಾಮನೆ’ ಕಾರ್ಯಕ್ರಮದ ಅಂಗವಾಗಿ ನಗರದ ಅಚ್ಚಪ್ಪ ನಾಗರಾಜ್ ಅವರ ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ ಲಿಂ. ಅಚ್ಚಪ್ಪ ಸೋಮಪ್ಪ, ಹಂಪಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಶರಣರ ಸಂದೇಶ’ ವಿಷಯ ಕುರಿತು  ಉಪನ್ಯಾಸ ನೀಡಿದರು.

‘ನುಡಿದಂತೆ ನಡೆ ಎಂದು ತಿಳಿಸುವ ಶರಣರ ವಚನಗಳು, ಕಾಯಕ, ದಾಸೋಹ ಮತ್ತು ಪ್ರಸಾದ ಸಂಸ್ಕೃತಿಯನ್ನು ಸಾರುತ್ತಿವೆ. ನಮ್ಮನ್ನು ನಾವು ತಿದ್ದಿಕೊಳ್ಳಲು ಸಹಕಾರಿಯಾಗಿವೆ’ ಎಂದ ಅವರು, ‘ದುಡಿದು ತಿನ್ನಬೇಕು ಎನ್ನುವುದು ಕಾಯಕ ತತ್ತ್ವದ ಮೂಲ ಸಂದೇಶವಾಗಿದೆ. ಬೆವರು ಹರಿಸಿ ದುಡಿದು ಮಾಡಿದ ಊಟ ಕೋಟಿ ರೂಪಾಯಿಗಿಂತಲೂ ಮೌಲ್ಯಯುತವಾದದ್ದು ಎಂಬುದನ್ನು ಶರಣರು ತಮ್ಮ ಜೀವನ ಸಾಧನೆಗಳ ಮೂಲಕ ತಿಳಿಸಿದ್ದಾರೆ’ ಎಂದರು.

ತನ್ನ ಸ್ವಂತದ ನೋವನ್ನು ಉದಾತ್ತೀಕರಿಸಿಕೊಂಡು, ಪರರ ನೋವಿಗೆ ಸ್ಪಂದಿಸಿದ ಶರಣರ ಸಾಮಾಜಿಕ ಕಳಕಳಿಯ ನಿಲುವು ಜನಸಾಮಾನ್ಯನ ಊಹೆಗೆ ನಿಲುಕದ್ದು. ಅಂತರಂಗದಲ್ಲಿರುವ ಅವಗುಣಗಳನ್ನು ಕಳೆದುಕೊಂಡರೆ ಮಾನವ ಮಹಾ ಮಾನವನಾಗಲು ಸಾಧ್ಯ. ಜಾತಿ ಸೂತಕ, ಲಿಂಗ ತಾರತಮ್ಯಗಳಿಲ್ಲದ ಶರಣರ ದೃಷ್ಟಿ ಅನನ್ಯ, ಸರ್ವಮಾನ್ಯ ಎಂದು ಅವರು ಹೇಳಿದರು.

ಶರಣರ ಕಾಯಕ, ದಾಸೋಹ ಮತ್ತು ಪ್ರಸಾದ ತತ್ವಗಳು ವ್ಯಕ್ತಿಯ ಜೀವನವನ್ನು ಆರೋಗ್ಯಪೂರ್ಣ­ವನ್ನಾಗಿಸಿ ಸಂತೃಪ್ತ ಜೀವನ ನಡೆಸಲು ಸಹಕಾರಿಯಾಗಿವೆ. ಐಹಿಕ ಸಂಪತ್ತಿನ ಹೆಚ್ಚಳಕ್ಕಿಂತ ಆತ್ಮ ತೃಪ್ತಿ ಬಹಳ ದೊಡ್ಡದು. ಅದೇ ಶರಣರ ಸಂದೇಶ ಎಂದು ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಿ ಡಾ. ವಿ.ಎಸ್.ವೀರಣ್ಣ ತಿಳಿಸಿದರು.

ಗೌತಮಿ ಪರ್ಥಿಸಿದರು. ಅಚ್ಚಪ್ಪ ನಾಗರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.  ಶರಣ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು. ಡಾ. ಮಲ್ಲಿಕಾರ್ಜುನ­ಗೌಡ, ಇತಿಹಾಸ ಸಂಶೋಧಕ ವೈ. ಹನುಮಂತರೆಡ್ಡಿ, ಉಪನ್ಯಾಸಕ ಬೋಗಾರ್ ಸತ್ಯವಾನ್, ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.