ADVERTISEMENT

‘ಸರ್ವರ ಹಿತ ಬಯಸಿದ ಪಂಚ ಪೀಠಗಳು’

ಮರುಳಸಿದ್ಧೇಶ್ವರರ ಪುಣ್ಯಸ್ಮರಣೆ; ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 7:05 IST
Last Updated 17 ಡಿಸೆಂಬರ್ 2013, 7:05 IST

ಕೂಡ್ಲಿಗಿ: ‘ಪಂಚ ಪೀಠಗಳು ವೀರಶೈವ ಧರ್ಮಕ್ಕೆ ಜಯವಾಗಲಿ ಎಂದು ಎಲ್ಲಿಯೂ ಹೇಳದೆ, ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿ ಇಡೀ ಜಗತ್ತಿನ ಶ್ರೇಯಸ್ಸನ್ನು ಬಯಸಿದರೆ ಹೊರತು, ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ’ ಎಂದು ಕೆಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಅವರು ಸೋಮವಾರ ತಾಲ್ಲೂಕಿನ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ನಡೆದ ಸಾಮೂಹಿಕ ವಿವಾಹ ಮತ್ತು ಲಿಂಗೈಕ್ಯ ಜಗದ್ಗುರು ಶ್ರೀ ಮರುಳಸಿದ್ಧೇಶ್ವರಸ್ವಾಮಿ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಂಭಾಪುರಿ ಜಗದ್ಗುರು ವೀರ ಸೋಮೇಶ್ವರ ಸ್ವಾಮಿಗಳು ನಾಡಿನಾದ್ಯಂತ ಜನರಲ್ಲಿ ಧರ್ಮ ಜಾಗೃತಿ ಕಾರ್ಯ ಕೈಗೊಂಡಿದ್ದು, ಸ್ವಾಮೀಜಿ ಅಡ್ಡಪಲ್ಲಕ್ಕಿ ನಡೆಸು­ವುದು ಜನರು ಇಟ್ಟುಕೊಂಡಿರುವ ನಂಬಿಕೆಯಾಗಿದೆ. ಆದರೆ  ಮೂಢನಂಬಿಕೆಗಳ ಹೆಸರಲ್ಲಿ ಕೆಲವರು ಅದಕ್ಕೆ ಭಂಗ ತರುವ ಕೆಲಸ ನಡೆಯದು ಎಂದು ಹೇಳಿದರು.

ದೇಶದಲ್ಲಿ ಜೈನ ಮುನಿಗಳು ಕೂದಲು ಕಿತ್ತುಕೊಂಡು ಹಿಂಸೆ ಅನುಭವಿಸುತ್ತಾರೆ, ಮೊಹರಮ್‌ದಲ್ಲಿ ರಕ್ತ ಬರುವಂತೆ ಚಾಟಿಯಿಂದ ಹೊಡೆದುಕೊಳ್ಳುವುದು ಜನರು ಧರ್ಮದಲ್ಲಿ ಇಟ್ಟುಕೊಂಡಿರುವ ನಂಬಿಕೆಗಳಾಗಿದ್ದು, ಮೂಢನಂಬಿಕೆಗಳ ಹೆಸರಲ್ಲಿ ಇವುಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ, ರೈತರಿಗೆ ಬಡ್ಡಿ ರಹಿತ ಸಾಲ, ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾದ ಎಲ್ಲಾ ವರ್ಗದವರಿಗೂ ಪ್ರೋತ್ಸಾಹಧನ,  ಜಾತಿ ಭೇದವಿಲ್ಲದೆ ಮಠ, ಮಾನ್ಯಗಳ ಅಭಿವೃದ್ಧಿಗೆ ₨ ೭೦೦ ಕೋಟಿ ಅನುದಾನ, ಜನರಿಗೆ ಯಾವುದೇ ಹೆಚ್ಚನ ತೆರಿಗೆ ಹಾಕದೆ ₨ ೩೮ ಸಾವಿರ ಕೋಟಿ ಬಜೆಟ್‌ನ್ನು ₨ ೮೦ ಸಾವಿರ ಕೋಟಿ ಏರಿಸಿದ್ದೆ. ಸರ್ಕಾರ ನೀಡಿದ ಹಣವನ್ನು ಮಠ ಮಾನ್ಯಗಳು ಎಲ್ಲಿಯೂ ತಮ್ಮ ಸ್ವಂತಕ್ಕೆ ಬಳಸಿಕೊಳ್ಳದೆ ಸಾರ್ವಜಕರ ಹಿತಕ್ಕಾಗಿ ಬಳಸಿಕೊಂಡಿವೆ ಎಂದು ತಿಳಿಸಿದರು.
ರಂಭಾಪುರಿ ಪೀಠದ ಜಗದ್ಗುರು ವೀರ ಸೋಮೇಶ್ವರ ಶಿವಾಚಾರ್ಯರು, ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಾಜಿ ಸಂಸದ ವಿಜಯ ಸಂಕೇಶ್ವರ ಸದ್ಧರ್ಮ ಪ್ರಭಾ ಪತ್ರಿಕೆ ಬಿಡುಗಡೆ ಮಾಡಿದರು. ಶಾಸಕರಾದ ಯು.ಬಿ ಬಣಕಾರ, ಡಾ.ವಿಶ್ವನಾಥ ಪಾಟೀಲ, ಶಿವಗಂಗೆಯ ಮಲಯಶಾಂತಮುನಿ ಸ್ವಾಮಿ, ಎಮ್ಮಿಗನೂರಿನ ವಾಮದೇವ ಸ್ವಾಮೀಜಿ, ಮಹರ್ಷಿ ಆನಂದ ಗುರೂಜಿ ಮಾತನಾಡಿದರು.

ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂಎಂಜೆ ಹರ್ಷವರ್ದನ, ಚೊಕ್ಕಬಸವನಗೌಡ, ಮಾಜಿ ಶಾಸಕರಾದ ಬಿ.ಪಿ. ಹರೀಶ್, ಎಸ್.ವಿ. ರಾಮಚಂದ್ರ ಮತ್ತು ನಾಡಿನ ಅನೇಕ ಮಠಾಧೀಶರು ಇದ್ದರು. ಶ್ರೀ ಯೋಗಿ ರಾಜೇಂದ್ರ ಸ್ವಾಮಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಜೆ.ಎಚ್.ಎಂ .ವಾಗೀಶ್ ಮೂರ್ತಿ ಮತ್ತು ಶಿವಕುಮಾರಸ್ವಾಮಿ ಸಂಗೀತ ಸೇವೆ ನೀಡಿದರು. ಉಪನ್ಯಾಸಕ ಎಂ.ಪಿ.ಎಂ. ಮಂಜುನಾಥ ಸ್ವಾಗತಿಸಿದರು, ಗಿರಿಜಾದೇವಿ, ನಿರಂಜನ ದೇವರಮನಿ ನಿರೂಪಿಸಿದರು.

ಇದಕ್ಕೂ ಮೊದಲು ಲಿಂ.ಜಗದ್ಗುರು ಶ್ರೀ ಮರುಳಸಿದ್ಧೇಶ್ವರ ಸ್ವಾಮಿಗಳ ಗದ್ದುಗೆ ಬಳಿ ಬೆಳಿಗ್ಗೆ ಹೋಮ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.