ADVERTISEMENT

‘ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ ್ಕೆ ತಡೆ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 7:06 IST
Last Updated 17 ಡಿಸೆಂಬರ್ 2013, 7:06 IST

ಹಗರಿಬೊಮ್ಮನಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ­ನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ರಾಜ್ಯದ ಕ್ಷೇತ್ರಗಳ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಿಂದ ಶಾಸಕರ ಪ್ರದೇಶಾಭಿವೃದ್ಧಿ ವಾರ್ಷಿಕ ಅನುದಾನವನ್ನು ಒಂದು ಕೋಟಿಯಿಂದ ಎರಡು ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು.

ಪಟ್ಟಣದ ಹಾಲಸ್ವಾಮಿ ಮಠದಲ್ಲಿ 15ನೇ ವರ್ಷದ ಕಾರ್ತಿಕೋತ್ಸವ ಹಾಗೂ 7ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಜರುಗಿದ ಉಚಿತ ಶಿವದೀಕ್ಷೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದ ಧರ್ಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಠ ಮಾನ್ಯಗಳು ಸಾಮೂಹಿಕ ವಿವಾಹ ಕೈಗೊಳ್ಳುವುದರಿಂದ ದುಂದುವೆಚ್ಚ ತಡೆಗಟ್ಟಲು ಸಹಾಯಕವಾಗುವ ಜೊತೆಗೆ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯವಾಗುತ್ತದೆ ಎಂದು ಆಶಿಸಿದರು.

ಶಾಸಕ ಎಲ್‌.ಬಿ.ಪಿ. ಭೀಮಾನಾಯ್ಕ ಮಾತನಾಡಿ, ವಸತಿ ಸಹಿತ ನೀರಾವರಿ ಹಾಗೂ ಇತರೇ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಅನುದಾನವನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರಲ್ಲಿ ಕೋರಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮರಿಯಮ್ಮನಹಳ್ಳಿ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ನಂದೀಪುರ ಮಹೇಶ್ವರ ಸ್ವಾಮೀಜಿ ಸಮಾರಂಭವನ್ನು ಉದ್ಘಾಟಿಸಿದರು.

ಹಾಲಶಂಕರ ಸ್ವಾಮೀಜಿ ನೇತೃತ್ವ ವಹಿಸಿದ್ದ ವಿವಾಹ ಸಮಾರಂಭದಲ್ಲಿ 16ಜೋಡಿಗಳು ಸಪ್ತಪದಿ ತುಳಿದರು. ವೇದಮೂರ್ತಿಗಳಾದ ಎಚ್‌.ಎಂ.ಮುದುಕಯ್ಯ ಸ್ವಾಮಿ ಮತ್ತಿತರರು ಪೌರೋಹಿತ್ಯ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಸಂತ್‌, ರತ್ನಮ್ಮ ಸಿದ್ಧಲಿಂಗನಗೌಡರ್‌, ರೋಗಾಣಿ ಹುಲುಗಪ್ಪ, ಮಾಜಿ ಸದಸ್ಯ ಅಕ್ಕಿ ತೋಟೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್‌, ಮುಖಂಡರಾದ ಹೆಗ್ಡಾಳು ರಾಮಣ್ಣ, ಹೂಗಾರ್‌ ಮಲ್ಲಿಕಾರ್ಜುನ, ಬುಡ್ಡಿ ಬಸವರಾಜ್‌, ಜೆಡಿಎಸ್‌ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ತಾ.ಪಂ.ಸದಸ್ಯ ಉಪ್ಪಾರ ಬಾಲು, ಬಿ.ಜಿ. ಬಡಿಗೇರ್‌, ಉಮಾಪತಿ, ಸಿ.ಎಸ್‌. ಸಿದ್ಧರಾಜ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಂಗೀತ ಶಿಕ್ಷಕಿ ಶಾರದಾ ಮತ್ತು ಉಲವತ್ತಿಯ ಮೌನೇಶ್‌ ಬಡಿಗೇರ್‌ ಪ್ರಾರ್ಥನಾ ಗೀತೆ ಹಾಡಿದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ನಾಗನಗೌಡ ಮತ್ತು ಬ್ಯಾಲಾಳು ಕರಿಬಸರಾಜ ಗೌಡ್ರು ಕಾರ್ಯಕ್ರಮ ನಿರೂಪಿಸಿದರು.

ತೆಪ್ಪೋತ್ಸವ ಇಂದು

ಬಳ್ಳಾರಿ: ಇತಿಹಾಸ ಪ್ರಸಿದ್ಧ ಹಂಪಿಯಲ್ಲಿನ ವಿರೂಪಾಕ್ಷೇಶ್ವರ ಸ್ವಾಮಿಯ ತೆಪ್ಪೋತ್ಸವವು ಇದೇ 17ರಂದು ರಾತ್ರಿ 8.-30ಕ್ಕೆ ಮನ್ಮುಖ ತೀರ್ಥದಲ್ಲಿ   ನಡೆಯಲಿದೆ.  ಶ್ರೀ ಚಕ್ರತೀರ್ಥ ಕೋದಂಡರಾಮ ಸ್ವಾಮಿಯ ಸನ್ನಿಧಿಯಲ್ಲಿ ಡಿಸೆಂಬರ್ 19ರಂದು ರಾತ್ರಿ 10ಕ್ಕೆ ಫಲಪೂಜಾ ಮಹೋತ್ಸವವು ವಿಜೃಂಭಣೆಯಿಂದ ಜರುಗುವುದು ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಎಂ.ಎಚ್‌. ಪ್ರಕಾಶರಾವ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಫಲಪೂಜಾ ನಂತರ ಶ್ರೀ ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಸಂಸ್ಥಾನದ ಪೀಠಾಧಿಪತಿಗಳಾದ ಜಗದ್ಗುರು ಶಂಕರಾಚಾರ್ಯರು ಆಶೀರ್ವಚನ ನೀಡಲಿದ್ದಾರೆ.     ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT