ADVERTISEMENT

ಕೊಲೆ; ಏಳು ಜನರಿಗೆ ಹತ್ತು ವರ್ಷ ಕಾರಾಗೃಹ ಶಿಕ್ಷೆ

ಮೃತರ ಕುಟುಂಬಕ್ಕೆ ತಲಾ ₹4 ಲಕ್ಷ ಕೊಡಲು ಆದೇಶ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 19:22 IST
Last Updated 2 ನವೆಂಬರ್ 2019, 19:22 IST

ಹೊಸಪೇಟೆ: ವ್ಯಕ್ತಿಯ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ಆತನನ್ನು ಬರ್ಬರವಾಗಿ ಕೊಲೆ ಮಾಡಿರುವ ಇಲ್ಲಿನ ಚಿತ್ತವಾಡ್ಗಿಯ ಏಳು ಜನರಿಗೆ ಶನಿವಾರ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ. ರಾಜಶೇಖರ್‌ ಅವರು ಹತ್ತು ವರ್ಷ ಕಠಿಣ ಕಾರಾಗೃಹ ಶಿಕ್ಷೆ, ತಲಾ ₹75,000 ದಂಡ ಹಾಗೂ ಮೃತರ ಕುಟುಂಬಕ್ಕೆ ಆರೋಪಿಗಳು ತಲಾ ₹4 ಲಕ್ಷ ಪರಿಹಾರ ನೀಡಬೇಕೆಂದು ಆದೇಶ ನೀಡಿದ್ದಾರೆ.

ಝರೋದ್ದೀನ್‌, ಬಿ. ಸಲೀಂ, ಅಲಿ ಬಾಷಾ, ಮೊಹಮ್ಮದ್‌ ಅಬ್ರಾರ್‌, ಅಕ್ಬರ್‌, ಇಮಾಮ್‌ ತೌಸಿಫ್‌ ಮತ್ತು ಕೆ.ಸಿರಾಜ್‌ ಶಿಕ್ಷೆಗೆ ಗುರಿಯಾದವರು.

ಆರೋಪಿಗಳು 2015ರ ಅಕ್ಟೋಬರ್‌ 7ರಂದು ನಗರದ ನಿವಾಸಿ ಎಚ್‌.ಎಂ. ಶಿವಶಂಕರ ಎಂಬುವರನ್ನು ಅಪಹರಿಸಿ, ಅವರ ಬಳಿಯಿದ್ದ ಚಿನ್ನದ ಉಂಗುರ, ಚೈನ್‌, ಮೊಬೈಲ್‌ ಹಾಗೂ ₹5,000 ನಗದು ಕಿತ್ತುಕೊಂಡು, ಬಳಿಕ ಕಟ್ಟಿಗೆ, ಕಲ್ಲುಗಳಿಂದ ಮನಬಂದಂತೆ ಹೊಡೆದು ಸಾಯಿಸಿದ್ದಾರೆ. ಗುರುತು ಸಿಗಬಾರದೆಂದು ಮುಖದ ಮೇಲೆ ಸೈಜ್‌ಗಲ್ಲು ಹಾಕಿ, ಬಳಿಕ ಬಂಡೆಗಲ್ಲು ಕಟ್ಟಿ ಮೃತದೇಹವನ್ನು ಚಿತ್ತವಾಡ್ಗಿ ಬಳಿಯ ತುಂಗಭದ್ರಾ ಜಲಾಶಯದ ಕಾಲುವೆಗೆ ಎಸೆದು ಹೋಗಿದ್ದರು.

ADVERTISEMENT

ಈ ಕುರಿತು ಶಿವಶಂಕರ್‌ ಅವರ ಸಹೋದರ ಚಿತ್ತವಾಡ್ಗಿ ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಶನಿವಾರ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಎಂ.ಬಿ. ಸುಂಕಣ್ಣ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.